Site icon Vistara News

Adani Hindenburg Row: ಅದಾನಿಯನ್ನು ಟಾರ್ಗೆಟ್‌ ಮಾಡಿ ಹಿಂಡನ್‌ಬರ್ಗ್‌ ವರದಿ; ಕಾಂಗ್ರೆಸ್ ನಿಲುವಿಗೆ ಶರದ್‌ ಪವಾರ್‌ ವಿರೋಧ

Sharad Pawar

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರ ಕುರಿತು ಅಮೆರಿಕದ ಹಿಂಡನ್‌ಬರ್ಗ್‌ ವರದಿ (Adani Hindenburg Row) ಪ್ರಕರಣದಲ್ಲಿ ಪ್ರತಿಪಕ್ಷಗಳಲ್ಲೇ ಬಿರುಕು ಮೂಡಿದೆ. ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (JPC) ರಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಂತೂ ವಿದೇಶದಲ್ಲೂ ಅದಾನಿ ಪ್ರಕರಣದ ಕುರಿತು ಮಾತನಾಡುತ್ತಿದ್ದಾರೆ. ಹಿಂಡನ್‌ಬರ್ಗ್‌ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಪಕ್ಷಗಳು ಕಾಂಗ್ರೆಸ್‌ ನಿಲುವನ್ನು ಒಪ್ಪಿಕೊಂಡಿವೆ. ಇದರ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿರುವ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ನಿಲುವಿನ ವಿರುದ್ಧ ಮಾತನಾಡಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಅದಾನಿ ಹಿಂಡನ್‌ಬರ್ಗ್‌ ಬಗ್ಗೆ ಶರದ್‌ ಪವಾರ್‌ ಅವರು ಪ್ರಸ್ತಾಪಿಸಿದ್ದಾರೆ. “ದೇಶದಲ್ಲಿ ನಾವು (ಪ್ರತಿಪಕ್ಷಗಳು) ವಿಷಯಗಳನ್ನು ಆಧಾರವನ್ನಾಗಿ ಇಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಡಬೇಕು. ಆದರೆ, ನಾವು ಇದುವರೆಗೆ ಹಿಂಡನ್‌ಬರ್ಗ್‌ ವರದಿ ಬಗ್ಗೆ ಕೇಳಿಯೇ ಇರಲಿಲ್ಲ. ಅವರು ಇದುವರೆಎಗ ಯಾವುದೇ ಹೇಳಿಕೆ ನೀಡಲ್ಲ. ಅವರು ನೀಡಿದ ವರದಿಯು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಅಷ್ಟಕ್ಕೂ, ಆ ವರದಿಯನ್ನು ನಾವೇಕೆ ಗಂಭೀರವಾಗಿ ತೆಗೆದುಕೊಳ್ಳಬೇಕು? ಮೇಲ್ನೋಟಕ್ಕೆ ಒಬ್ಬ (ಅದಾನಿ) ವ್ಯಕ್ತಿಯನ್ನು ಗುರಿಯಾಗಿಸಿ ಸಿದ್ಧಪಡಿಸಿದ ವರದಿ ಇದಾಗಿದೆ ಎಂದು ಅನಿಸುತ್ತದೆ” ಎಂದು ಹೇಳಿದರು.

“ದೇಶದ ಒಂದು ಇಂಡಸ್ಟ್ರಿಯಲ್‌ ಗ್ರೂಪ್‌ಅನ್ನು ಗುರಿಯಾಗಿಸಿ ವರದಿ ತಯಾರಿಸಲಾಗಿದೆ. ವರದಿಯ ಮೂಲಾಧಾರ ಏನು? ಯಾರಾದರೂ ತಪ್ಪು ಮಾಡಿದರೆ ತನಿಖೆಯಾಗಲಿ. ಆದರೆ, ಹಿಂಡನ್‌ಬರ್ಗ್‌ ವರದಿ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತಿದೆ. ಆದರೆ, ನನಗೆ ಈ ನಿಲುವು ಇಷ್ಟವಾಗುತ್ತಿಲ್ಲ. ಕೋಕಾ-ಕೋಲಾ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಲಾಗಿತ್ತು. ಆದರೆ, ಪ್ರಕರಣದ ಆರಂಭದಲ್ಲಿಯೇ ಎಂದಿಗೂ ಜೆಪಿಸಿ ರಚನೆಯಾಗಿಲ್ಲ” ಎಂದ ಹೇಳಿದರು.

“ಹಾಗಂತ, ಜಂಟಿ ಸಂಸದೀಯ ಸಮಿತಿ ರಚನೆಗೆ ಬೇಡಿಕೆ ಇಡಲೇಬಾರದು ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ, ಏಕೆ ಜೆಪಿಸಿ ತನಿಖೆಯ ಬೇಡಿಕೆ ಇದೆ? ಒಂದು ಔದ್ಯಮಿಕ ಸಂಸ್ಥೆಯ ವಿರುದ್ಧ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕೆ? ಆಡಳಿತ ಪಕ್ಷದ ವಿರುದ್ಧವೇ ಜೆಪಿಸಿ ರಚಿಸಿದರೆ ತನಿಖೆ ಯಾವ ಮಾರ್ಗ ಹಿಡಿಯುತ್ತದೆ ಎಂಬುದು ಗೊತ್ತಿದೆ. ಆದರೆ, ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ. ಕೋರ್ಟ್‌ ವಿಚಾರದಲ್ಲಿ ಯಾರೂ ಮೂಗು ತೂರಿಸಲು ಬರುವುದಿಲ್ಲ. ಹಾಗಾಗಿ, ಜಂಟಿ ಸಂಸದೀಯ ಸಮಿತಿ ರಚನೆಯ ಅಗತ್ಯವೇ ಇಲ್ಲ” ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Adani Hindenburg Row: ಅದಾನಿ ಗ್ರೂಪ್‌ ಬಗ್ಗೆ ಹಿಂಡನ್‌ಬರ್ಗ್‌ ವರದಿ, ತನಿಖೆಗೆ ಸುಪ್ರೀಂ ನೇತೃತ್ವದಲ್ಲಿಯೇ ಸಮಿತಿ ರಚನೆ

Exit mobile version