Site icon Vistara News

Rahul Gandhi: ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಕೇಸ್;‌ ತೀರ್ಪು ಕಾಯ್ದಿರಿಸಿದ ಕೋರ್ಟ್‌, ಏ.20ಕ್ಕೆ ಆದೇಶ

On Rahul Gandhi's Challenge To Defamation Sentence, Order On April 20

On Rahul Gandhi's Challenge To Defamation Sentence, Order On April 20

ಗಾಂಧಿನಗರ: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ದೋಷಿ ಎಂದು ಮ್ಯಾಜಿಸ್ಟ್ರೇಟ್‌ ಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಸೂರತ್‌ ಸೆಷನ್ಸ್‌ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಸೂರತ್‌ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ರಾಹುಲ್‌ ಗಾಂಧಿ ಅರ್ಜಿ ಸಲ್ಲಿಸಿದ್ದು, ಈ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್‌ 20ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ರಾಹುಲ್‌ ಗಾಂಧಿ ಪರ ವಾದ ಮಂಡಿಸಿದ ಚೀಮಾ, “ರಾಹುಲ್‌ ಗಾಂಧಿ ಅವರು ನೀಡಿದ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಅವರು ಆಡಿದ ಮಾತುಗಳನ್ನು ಬೇರೆ ಅರ್ಥದಲ್ಲಿ ಬಿಂಬಿಸಲಾಗಿದೆ. ನರೇಂದ್ರ ಮೋದಿ ಅವರನ್ನು ಟೀಕಿಸಿದ್ದನ್ನೇ ಮಾನಹಾನಿ ರೀತಿ ಬಿಂಬಿಸಲಾಗಿದೆ. ಹಾಗಾಗಿ, ಸೂರತ್‌ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ” ಎಂದರು. ಅರ್ಜಿದಾರ ಪೂರ್ಣೇಶ್‌ ಮೋದಿ ಪರ ವಕೀಲರು ಕೂಡ ವಾದ ಮಂಡಿಸಿದರು. ಬಳಿಕ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತು.

ಮೋದಿ ಉಪನಾಮ ಹೊಂದಿರುವವರೆಲ್ಲ ಏಕೆ ಕಳ್ಳರು ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ ಬಳಿಕ ಮಾನಹಾನಿ ಕೇಸ್‌ ದಾಖಲಾಗಿದ್ದು, ಮಾರ್ಚ್‌ 23ರಂದು ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ನಾಯಕನನ್ನು ದೋಷಿ ಎಂದು ತೀರ್ಪು ನೀಡಿದೆ. ಹಾಗೆಯೇ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ರಾಹುಲ್‌ ಗಾಂಧಿ ಅವರು ಲೋಕಸಭೆಯಿಂದ ಅನರ್ಹರಾಗಿದ್ದಾರೆ.

ಏಪ್ರಿಲ್‌ 25ಕ್ಕೆ ಪಟನಾ ಕೋರ್ಟ್‌ಗೆ ಹಾಜರಿ ಕಡ್ಡಾಯ

ಮೋದಿ ಉಪನಾಮ ಕುರಿತು ರಾಹುಲ್‌ ಗಾಂಧಿ ಹೇಳಿಕೆ ಖಂಡಿಸಿ ರಾಜ್ಯಸಭೆ ಸದಸ್ಯ, ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಅವರು ಪಟನಾದ ಎಂಪಿ-ಎಂಎಲ್‌ಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ರಾಹುಲ್‌ ಗಾಂಧಿ ಅವರು ಏಪ್ರಿಲ್‌ 25ರಂದು ಹಾಜರಾಗಬೇಕು ಎಂದು ಕೋರ್ಟ್‌ ಸಮನ್ಸ್‌ ನೀಡಿದೆ. “ರಾಹುಲ್‌ ಗಾಂಧಿ ಅವರು ಮೋದಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ” ಎಂದು ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ ಸಮನ್ಸ್‌ ನೀಡಿದೆ. ಅದರಂತೆ, ರಾಹುಲ್‌ ಗಾಂದಿ ಅವರು ಏಪ್ರಿಲ್‌ 25ರಂದು ಪಟನಾ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ಸುಶೀಲ್‌ ಕುಮಾರ್‌ ಮೋದಿ ಅವರು ಸಲ್ಲಿಸಿದ ಅರ್ಜಿಯನ್ನು ಮಾರ್ಚ್‌ 18ರಂದು ವಿಚಾರಣೆ ನಡೆಸಿದ್ದ ಎಂಪಿ-ಎಂಎಲ್‌ಎ ಕೋರ್ಟ್‌ ಸ್ಪೆಷಲ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಆದಿ ದೇವ್‌ ಅವರು, ಏಪ್ರಿಲ್‌ 12ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ ಗಾಂಧಿ ಅವರಿಗೆ ಸೂಚಿಸಿದ್ದರು. ಆದರೆ, ಸೂರತ್‌ ನ್ಯಾಯಾಲಯದ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಹಾಗೂ ಅವರ ಪರ ವಕೀಲರ ತಂಡವು ಬ್ಯುಸಿಯಾಗಿದೆ. ಹಾಗಾಗಿ, ಮತ್ತೊಂದು ದಿನಾಂಕ ನಿಗದಿಪಡಿಸುವಂತೆ ಕಾಂಗ್ರೆಸ್‌ ನಾಯಕನ ಪರ ವಕೀಲರ ವಾದ ಮಂಡಿಸಿದರು. ಇದಕ್ಕೆ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಇದನ್ನೂ ಓದಿ: ನಿಮ್ಮ ನಾಲಗೆ ಕತ್ತರಿಸುತ್ತೇವೆ, ರಾಹುಲ್‌ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಜಡ್ಜ್‌ಗೆ ಕೈ ನಾಯಕ ಬೆದರಿಕೆ

Exit mobile version