Site icon Vistara News

Kochi Blast: ಕೇರಳದಲ್ಲಿ ಭಾರಿ ಸ್ಫೋಟಕ್ಕೆ ಮಹಿಳೆ ಬಲಿ, 23 ಮಂದಿಗೆ ಗಾಯ; ಉಗ್ರರ ಕೃತ್ಯ?

Kochi Blast

One killed, over 20 injured in blast at convention centre in Kochi

ತಿರುವನಂತಪುರಂ: ಕೇರಳದ ಎರ್ನಾಕುಲಂನಲ್ಲಿರುವ ಕ್ರಿಶ್ಚಿಯನ್‌ ಸಮುದಾಯದ ಕನ್ವೆನ್ಷನ್‌ ಸೆಂಟರ್‌ (Convention Center) ಒಂದರಲ್ಲಿ ಭಾರಿ ಪ್ರಮಾಣದ ಸ್ಫೋಟ (Kochi Blast) ಸಂಭವಿಸಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ (ಅಕ್ಟೋಬರ್‌ 29) ತೀವ್ರ ಸ್ಫೋಟ ಸಂಭವಿಸಿದ್ದು, ಗಾಯಗೊಂಡ ಸುಮಾರು 23 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕಾಏಕಿ ಸ್ಫೋಟ ಸಂಭವಿಸಿದ ಕಾರಣ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಉಗ್ರ ದಾಳಿಯ ಶಂಕೆ ವ್ಯಕ್ತವಾಗಿದೆ.

ಎರ್ನಾಕುಲಂನ ಕಲಮಶ್ಶೇರಿಯಲ್ಲಿರುವ ಜಾಮ್ರಾ ಇಂಟರ್‌ನ್ಯಾಷನಲ್‌ ಸಭಾಭವನದಲ್ಲಿ ಬೆಳಗ್ಗೆ 9.45ರ ಸುಮಾರಿಗೆ ಜೆಹೋವಾಹ್‌ ಪ್ರಾರ್ಥನೆಗಾಗಿ ಸುಮಾರು ಎರಡು ಸಾವಿರ ಕ್ರೈಸ್ತ ಸಮುದಾಯದವರು ಸೇರಿದ್ದರು. ಇದೇ ವೇಳೆ ಸತತವಾಗಿ ಮೂರು ಸ್ಫೋಟ ಸಂಭವಿಸಿವೆ. ಸ್ಫೋಟದ ತೀವ್ರತೆಗೆ ಬೆಂಕಿ ಹೊತ್ತಿಕೊಳ್ಳುತ್ತಲೇ ನೂರಾರು ಜನ ಹೊರಗೆ ಓಡಿಬಂದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಭೀಕರ ಸ್ಫೋಟದ ವಿಡಿಯೊ

“ಬೆಳಗ್ಗೆ 9.45ರ ಸುಮಾರಿಗೆ ಸಾವಿರಾರು ಜನ ಪ್ರಾರ್ಥನೆಯಲ್ಲಿ ತೊಡಗಿದ್ದರು. ಇದೇ ವೇಳೆ ಮೊದಲ ಸ್ಫೋಟ ಸಂಭವಿಸಿದೆ. ಏನಿದು ಸ್ಫೋಟ ಎಂದು ಜನ ಯೋಚಿಸುವ ಹೊತ್ತಿಗೆ ಸತತ ಮೂರು ಬಾರಿ ಸ್ಫೋಟ ಸಂಭವಿಸಿವೆ. ಇದರಿಂದಾಗಿ ಕೂಡಲೇ ಜನ ಹೊರಗೆ ಓಡಿ ಬಂದರು” ಎಂದು ಜೆಹೋವಾಸ್‌ ವಿಟ್‌ನೆಸ್‌ ವಕ್ತಾರ ಟಿ.ಎ.ಶ್ರೀಕುಮಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Pakistan Blast: ಅಲ್ಲಾ ಹು ಅಕ್ಬರ್‌ ಎನ್ನುವಾಗಲೇ ಬಾಂಬ್‌ ಸ್ಫೋಟ; ದಾಳಿಯ ಭೀಕರ ವಿಡಿಯೊಗಳು ಇಲ್ಲಿವೆ

ಉಗ್ರರ ದಾಳಿಯ ಶಂಕೆ

ಕೆಲವು ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಕೆಲವೇ ನಿಮಿಷಗಳಲ್ಲಿ ಐದು ಸ್ಫೋಟ ಸಂಭವಿಸಿವೆ ಎಂದು ತಿಳಿದುಬಂದಿದೆ. ಹೀಗೆ ಸತತವಾಗಿ ಸ್ಫೋಟಕಗಳು ಸ್ಫೋಟಗೊಂಡಿರುವುದನ್ನು ನೋಡಿದರೆ, ಇದು ಉಗ್ರರ ದಾಳಿ ಇರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಮಾಹಿತಿ ಇದುವರೆಗೆ ತಿಳಿದುಬಂದಿಲ್ಲ. ಕೇರಳದಲ್ಲಿ ಐಸಿಸ್‌ ಉಗ್ರರ ಉಪಟಳ, ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ವರ್ಷಗಳಿಂದ ಎನ್‌ಐಎ ತನಿಖೆ ನಡೆಸುತ್ತಿದೆ. ಹಾಗಾಗಿ, ಕೇರಳದ ಕೊಚ್ಚಿಯಲ್ಲಿ ನಡೆದ ಸ್ಫೋಟದ ಕುರಿತು ಹಲವು ಅನುಮಾಗಳು ವ್ಯಕ್ತವಾಗಿವೆ.

ರಾಜ್ಯದ ಕೈಗಾರಿಕಾ ಸಚಿವ ಪಿ. ರಾಜೀವ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಗಾಯಾಳುಗಳ ಚಿಕಿತ್ಸೆಗೆ ಸಕಲ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಸಿಎಂಗೆ ಕರೆ ಮಾಡಿದ ಅಮಿತ್‌ ಶಾ

ಸ್ಫೋಟದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಘಟನೆ ಕುರಿತು ತನಿಖೆ ನಡೆಸಲು ಎನ್‌ಐಎ ಹಾಗೂ ಎನ್‌ಎಸ್‌ಜಿ ಪಡೆಗಳು ಸ್ಥಳಕ್ಕೆ ತೆರಳಲು ಅಮಿತ್‌ ಶಾ ಸೂಚನೆ ನೀಡಿದ್ದಾರೆ.

Exit mobile version