ತಿರುವನಂತಪುರಂ: ಕೇರಳದಲ್ಲಿ ದಿನೇದಿನೆ ನಿಫಾ ವೈರಸ್ (Nipah Virus) ಹಾವಳಿ ಜಾಸ್ತಿಯಾಗುತ್ತಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿಯೇ ಮತ್ತೊಬ್ಬರಿಗೆ ನಿಫಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈಗಾಗಲೇ ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ರಾಜ್ಯ ಸರ್ಕಾರವು ಕಂಟೇನ್‌ಮೆಂಟ್ ವಲಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಮುಂದಾಗಿದೆ.
ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 39 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸುಮಾರು ಒಂದು ಸಾವಿರ ಜನರನ್ನು ಗುರುತಿಸಲಾಗಿದ್ದು, ಇವರಲ್ಲಿ 80ಕ್ಕೂ ಅಧಿಕ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂಧವರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಲ್ಲಿಕೋಟೆಯಲ್ಲಿಯೇ ಆರು ಜನರಿಗೆ ಸೋಂಕು ತಗುಲಿದ ಕಾರಣ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುಮಾರು 9 ಗ್ರಾಮಗಳನ್ನು ಕಂಟೇನ್‌ಮೆಂಟ್ ವಲಯಗಳು ಎಂದು ಗುರುತಿಸಲಾಗಿದೆ. ಇಲ್ಲೆಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಬೀಗ ಜಡಿಯಲು ಆದೇಶಿಸಲಾಗಿದೆ.
ಪ್ರತಿಕಾಯ ಕಳುಹಿಸಿದ ಐಸಿಎಂಆರ್
ನಿಫಾ ಸೋಂಕಿತರ ಚಿಕಿತ್ಸೆಗಾಗಿ ಬಳಸುವ ಮೋನೊಕ್ಲೋನಲ್ ಪ್ರತಿಕಾಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಕೇರಳಕ್ಕೆ ಕಳುಹಿಸಿದೆ. ಸೋಂಕಿತರಿಗೆ ಈ ಪ್ರತಿಕಾಯ ನೀಡುವ ಮೂಲಕ ಅವರನ್ನು ಸೋಂಕಿನಿಂದ ಮುಕ್ತಗೊಳಿಸಲು ಕೇರಳ ಸರ್ಕಾರವು ಐಸಿಎಂಆರ್‌ಗೆ ಮನವಿ ಮಾಡಿತ್ತು. ಅದರಂತೆ ಐಸಿಎಂಆರ್ ಮೋನೊಕ್ಲೋನಲ್ ಪ್ರತಿಕಾಯವನ್ನು ಕೇರಳಕ್ಕೆ ಕಳುಹಿಸಿದೆ.
ಇದನ್ನೂ ಓದಿ: Nipah virus: ನಿಪಾ ವೈರಸ್ ಬಗ್ಗೆ ನಿಗಾ ಇರಲಿ! ಇದರ ಲಕ್ಷಣವೇನು? ಕೋವಿಡ್‌ಗೂ ಅದಕ್ಕೂ ವ್ಯತ್ಯಾಸವೇನು? ಇಲ್ಲಿದೆ ವಿವರ
ನಿಫಾ ಲಕ್ಷಣಗಳೇನು?
ನಿಫಾ ಸೋಂಕಿತರು ಕೋವಿಡ್ ತರಹದ ರೋಗಲಕ್ಷಣಗಳನ್ನು ಪ್ರದರ್ಶಿಸಬಹುದು. ನಿಫಾ ವೈರಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಕೆಮ್ಮು, ನೋಯುತ್ತಿರುವ ಗಂಟಲು, ತಲೆತಿರುಗುವಿಕೆ, ಅರೆಮಂಪರು, ಸ್ನಾಯು ನೋವು, ದಣಿವು. ಮೆದುಳಿನ ಊತದ ಪರಿಣಾಮ ತಲೆನೋವು, ಕುತ್ತಿಗೆ ಬಿಗಿತ, ಬೆಳಕಿಗೆ ಕಿರಿಕಿರಿ, ಮಾನಸಿಕ ಗೊಂದಲ ಮತ್ತು ಸುಸ್ತು ಕಾಣಿಸಿಕೊಳ್ಳಬಹುದು. ಇದು ಗಂಭೀರ ಸ್ಥಿತಿಗೆ ಹೋದಾಗ ಪ್ರಜ್ಞಾಹೀನರಾಗಬಹುದು; ಅಂತಿಮವಾಗಿ ಸಾವಿಗೂ ಕಾರಣವಾಗಬಹುದು. ಆದರೆ ಕೋವಿಡ್‌ನಂತೆ ಇದರಲ್ಲಿ ವ್ಯಕ್ತಿ ವಾಸನೆ, ರುಚಿ ಕಳೆದುಕೊಳ್ಳುವುದಿಲ್ಲ. ಆದರೆ ಜ್ವರ ತೀವ್ರಗೊಂಡಾಗ ಸಹಜವಾಗಿಯೇ ರುಚಿಶಕ್ತಿ ಹಾಗೂ ಘ್ರಾಣಶಕ್ತಿ ಕಡಿಮೆಯಾಗಬಹುದು.