ನವದೆಹಲಿ: ಸೆಪ್ಟೆಂಬರ್ 18ರಿಂದ 22ರವರೆಗೆ ಐದು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನವನ್ನು (Parliament special session) ಕೇಂದ್ರ ಸರ್ಕಾರವು ಕರೆದಿದೆ. ಆದರೆ, ಯಾವ ಕಾರಣಕ್ಕೆ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂಬ ಮಾಹಿತಿಯನ್ನು ನೀಡಿಲ್ಲ(special session agenda). ಹಾಗಾಗಿ, ಮಾಧ್ಯಮಗಳಲ್ಲಿ ಅಧಿವೇಶನ ಅಜೆಂಡಾ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಈ ಅಧಿವೇಶನದಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ(One Nation One Election), ಏಕರೂಪ ನಾಗರಿಕ ಸಂಹಿತೆ (Uniform Civil Code) ಮತ್ತು ಮಹಿಳಾ ಮೀಸಲು (Woman reservation Bill) ವಿಧೇಯಕಗಳನ್ನು ಕೇಂದ್ರವು ಮಂಡಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಒಂದು ರಾಷ್ಟ್ರ- ಒಂದು ಚುನಾವಣೆ ಎನ್ನುವುದು ಲೋಕಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಕಲ್ಪನೆಯನ್ನು ಸೂಚಿಸುತ್ತದೆ. ಈ ಕುರಿತು ಈ ಹಿಂದೆಯೂ ಹಲವಾರು ಬಾರಿ ಪ್ರಸ್ತಾಪಿಸಲಾಗಿದೆ ಮತ್ತು ಭಾರತದ ಕಾನೂನು ಆಯೋಗವು ಅಧ್ಯಯನ ಕೂಡ ಮಾಡಿದೆ. ಪ್ರಸ್ತುತ, ಲೋಕಸಭೆಯಾಗಲೀ, ಆಯಾ ರಾಜ್ಯ ವಿಧಾನಸಭೆ ಚುನಾವಣೆಗಳು ಅವಧಿ ಮುಕ್ತಾಯಗೊಂಡ ಬಳಿಕ ಚುನಾವಣೆ ನಡೆಯುತ್ತವೆ. ಹಾಗಾಗಿ ಪ್ರತಿ ವರ್ಷವೂ ದೇಶದಲ್ಲಿ ಒಂದಿಲ್ಲ ಒಂದು ಭಾಗದಲ್ಲಿ ಚುನಾವಣೆ ಪರಿಸ್ಥಿತಿ ಇದ್ದೇ ಇರುತ್ತದೆ.
ಧರ್ಮಾಧಾರಿತ ವೈಯಕ್ತಿಕ ಕಾನೂನುಗಳ ಬದಲಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಧರ್ಮ, ಜಾತಿ, ಪಂಥ, ಲೈಂಗಿಕ ದೃಷ್ಟಿಕೋನ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಒಂದು ಸಾಮಾನ್ಯ ಕಾನೂನೊಂದಿಗೆ ಬದಲಾಯಿಸುವ ಗುರಿಯನ್ನು ಸರ್ಕಾರವು ಹೊಂದಿದೆ.
ಈ ಸುದ್ದಿಯನ್ನೂ ಓದಿ: Parliament Session: ಸಂಸತ್ ವಿಶೇಷ ಅಧಿವೇಶನ ಕರೆದ ಕೇಂದ್ರ; ಏಕರೂಪ ನಾಗರಿಕ ಸಂಹಿತೆ ಜಾರಿ?
ಇನ್ನೂ ಮಹಿಳಾ ಮೀಸಲಾತಿ ವಿಧೇಯಕವು ಬಹಳ ವರ್ಷಗಳಿಂದ ಚರ್ಚೆಯಲ್ಲಿದೆ. ಅಲ್ಲದೇ ನೆನೆಗುದಿಗೆ ಬಿದ್ದಿದೆ. ಲೋಕಸಭೆ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವುದು ಈ ವಿಧೇಯಕದ ಗುರಿಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದರೂ ರಾಜಕೀಯ ಪ್ರಾತಿನಿಧ್ಯದಲ್ಲಿ ಅವರ ಭಾಗವಹಿಸುವುದು ತೀರಾ ಕಡಿಮೆ ಇದೆ. ಹಾಗಾಗಿ, ಈ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರವು ಈ ವಿಶೇಷ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.