ನಾಗ್ಪುರ್, ಮಹಾರಾಷ್ಟ್ರ: ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ ಅಥವಾ ಒಂದೇ ಗುಂಪಿನಿಂದ ಮಾತ್ರವೇ ದೇಶವನ್ನು ನಿರ್ಮಾಣ ಮಾಡುವುದಾಗಲೀ ಅಥವಾ ವಿನಾಶ ಮಾಡುವುದಾಗಲೀ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಮಂಗಳವಾರ ರಾಜರತ್ನ ಪುರಸ್ಕಾರ ಸಮಿತಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ಒಬ್ಬ ವ್ಯಕ್ತಿ, ಒಂದು ವಿಚಾರ, ಒಂದು ಗುಂಪು, ಒಂದು ಸಿದ್ಧಾಂತವು ದೇಶವನ್ನು ನಿರ್ಮಾಣ ಮಾಡಲು ಅಥವಾ ಒಡೆಯಲು ಸಾಧ್ಯವಿಲ್ಲ. ಪ್ರಪಂಚದ ಉತ್ತಮ ದೇಶಗಳು ಎಲ್ಲಾ ರೀತಿಯ ಆಲೋಚನೆಗಳನ್ನು ಹೊಂದಿವೆ. ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿವೆ. ಈ ಬಹುಸಂಖ್ಯೆಯ ವ್ಯವಸ್ಥೆಗಳೊಂದಿಗೆ ಅವು ಬೆಳೆಯುತ್ತವೆ ಎಂದು ಹೇಳಿದರು.
ಆದರೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಈ ಹೇಳಿಕೆಯು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿದೆ. ಮೋದಿ ಸರ್ಕಾರವು ತನ್ನೆಲ್ಲ ಯೋಜನೆಗಳನ್ನು, ನೀತಿಗಳನ್ನು ಒನ್ ನೇಷನ್ ಪರಿಕಲ್ಪನೆಯಡಿ ಜಾರಿಗೆ ತರುತ್ತಿದೆ. ಇದೀಗ ಒನ್ ನೇಷನ್ ಒನ್ ಎಲೆಕ್ಷನ್‌ಗೂ ತನ್ನ ದಾಳವನ್ನು ಉರುಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಈ ಬಗ್ಗೆ ತಮ್ಮ ವಿಚಾರವನ್ನು ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: Mohan Bhagwat Remark: ಪಂಡಿತ ಎಂದರೆ ವಿದ್ವಾಂಸ, ಮೋಹನ್ ಭಾಗವತ್ ಹೇಳಿಕೆಗೆ ಸ್ಪಷ್ಟನೆ ನೀಡಿದ ಆರೆಸ್ಸೆಸ್
ಇದಕ್ಕೂ ಮುನ್ನ ಕಾನೂನು ಆಯೋಗವು ಏಕಕಾಲಕ್ಕೆ ಚುನಾವಣೆ ನಡೆಸುವುದು, ಲೋಕಸಭೆಯ ಸ್ಪೀಕರ್ ಆಗಿ ಪ್ರಧಾನಿ, ಮುಖ್ಯಮಂತ್ರಿಗಳ ನೇಮಕ ಕುರಿತು ವಿವಿಧ ಪಾಲುದಾರರ ಅಭಿಪ್ರಾಯಗಳನ್ನು ಕೇಳಿತ್ತು. ಆದರೆ, ಕೇಂದ್ರ ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಡಿಸಿದ್ದವು. ಬಿಜೆಪಿಗೆ ಕೇವಲ ಒಂದು ಅನ್ನುವ ಒಂದೇ ಒಂದು ಪದ ಮಾತ್ರ ಗೊತ್ತು ಟೀಕಿಸಿದ್ದವು. ಈಗ ಆರೆಸ್ಸೆಸ್ ಮುಖ್ಯಸ್ಥರೇ ಬಹುತ್ವದ ಬಗ್ಗೆ ಮಾತನಾಡುತ್ತಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ನೀತಿ ನಿರೂಪಣೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬಹುದೇ ಕಾದು ನೋಡಬೇಕು.