ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಎನ್‌ಕೌಂಟರ್ (Anantnag Encounter) ನಾಲ್ಕನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಭದ್ರತಾ ಸಿಬ್ಬಂದಿಯು ಬಾರಾಮುಲ್ಲಾ ಜಿಲ್ಲೆಯಲ್ಲೂ ಕಾರ್ಯಾಚರಣೆ (Baramulla Encounter) ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಒಬ್ಬ ಉಗ್ರನನ್ನು ಹೊಡೆದುರುಳಿಸುವ ಮೂಲಕ ಭಾರತದ ನಾಲ್ವರು ಯೋಧರ ಬಲಿದಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಒಬ್ಬನನ್ನು ಹೊಡೆದುರುಳಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ತಿಳಿದುಬಂದಿದೆ.
“ಬಾರಾಮುಲ್ಲಾ ಜಿಲ್ಲೆಯ ಉರಿ ಹಾಗೂ ಹತ್ಲಾಂಗ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೆರೆಗೆ ಯೋಧರು ಹಾಗೂ ಬಾರಾಮುಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದಾಗ ಯೋಧರು ಮುನ್ನಡೆ ಸಾಧಿಸಿ ಒಬ್ಬನನ್ನು ಹೊಡೆದುರುಳಿಸಿದ್ದಾರೆ. ಈಗಲೂ ಕಾರ್ಯಾಚರಣೆ ಮುಂದುವರಿದಿದೆ” ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
#BaramullaEncounterUpdate: 01 terrorist killed. Search going on. Further details shall follow. https://t.co/22dP32S8dT
— Kashmir Zone Police (@KashmirPolice) September 16, 2023
ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ (Anantnag Encounter) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸತತ 72 ಗಂಟೆಗಳಿಂದ ಹಗಲು-ರಾತ್ರಿ ಎನ್ನದೆ ಭದ್ರತಾ ಸಿಬ್ಬಂದಿಯು ಕಾಕೆರ್‌ನಾಗ್ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಒಂದೆಡೆ ದಟ್ಟ ಕಾಡು, ಮತ್ತೊಂದೆಡೆ ಬೆಟ್ಟ-ಗುಡ್ಡ ಇರುವುದರಿಂದ ಕಾರ್ಯಾಚರಣೆಗೆ ಅಡೆತಡೆ ಆಗುತ್ತಿದೆ. ಇಷ್ಟಾದರೂ ಛಲ ಬಿಡದ ಯೋಧರು ಆಪರೇಷನ್ ಮುಂದುವರಿಸಿದ್ದಾರೆ.
ಇದನ್ನೂ ಓದಿ: Anantnag Encounter: ಒಂದೆಡೆ ಕಾಡು, ಮತ್ತೊಂದೆಡೆ ಬೆಟ್ಟ; ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆಯುತ್ತಿರುವುದು ಹೇಗೆ?
ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ಕರ್ನಲ್ (Colonel) ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನೌಕ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ಹುತಾತ್ಮರಾಗಿದ್ದಾರೆ. ಇವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಸಾವಿರಾರು ಜನ ಭಾವುಕರಾಗಿ ವಿದಾಯ ಹೇಳಿದ್ದಾರೆ. ಮೇಜರ್ ಆಶಿಶ್ ಧೋನೌಕ್ ಅವರ ಅಂತ್ಯಸಂಸ್ಕಾರವು ಹರ್ಯಾಣದ ಪಾಣಿಪತ್‌ನಲ್ಲಿ ನೆರವೇರಿದ್ದು, ಭಾರತ್ ಮಾತಾ ಕೀ ಜೈ ಸೇರಿ ಹಲವು ಘೋಷಣೆಗಳನ್ನು ಕೂಗಿ ವೀರ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.