Site icon Vistara News

ಅರಬ್ಬಿ ಸಮುದ್ರದಲ್ಲಿ ಒಎನ್‌ಜಿಸಿ ಹೆಲಿಕಾಪ್ಟರ್‌ ತುರ್ತು ಜಲಸ್ಪರ್ಶ , ನಾಲ್ವರು ದುರ್ಮರಣ, ಐವರ ರಕ್ಷಣೆ

ಮುಂಬಯಿ: ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳಿದ್ದ ಒಎನ್‌ಜಿಸಿ ಹೆಲಿಕಾಪ್ಟರ್‌ ಒಂದು ಮುಂಬಯಿ ಸಮೀಪದ ಅರಬ್ಬೀ ಸಮುದ್ರದಲ್ಲಿ ಮಂಗಳವಾರ ತುರ್ತು ಜಲ ಸ್ಪರ್ಶ ಮಾಡುವಾಗ ಉಂಟಾದ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಐವರನ್ನು ರಕ್ಷಿಸಲಾಗಿದೆ.

ಈ ವಿಮಾನ ಸಮುದ್ರ ಮಧ್ಯದಲ್ಲಿ ಅದಕ್ಕಾಗಿಯೇ ನಿರ್ಮಿಸಲಾಗಿದ್ದ ರನ್‌ವೇಯಲ್ಲಿ ಇಳಿಯುವ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿ ಸಮುದ್ರ ನೀರಿನಲ್ಲೇ ಇಳಿಯಬೇಕಾಯಿತು ಎನ್ನಲಾಗಿದೆ. ಈ ವೇಳೆ ಉಂಟಾದ ಅವಘಡದಲ್ಲಿ ಎಲ್ಲ ಒಂಬತ್ತು ಮಂದಿ ಅಪಾಯಕ್ಕೆ ಸಿಲುಕಿದ್ದರು. ಅವರಲ್ಲಿ ಐವರನ್ನು ಭಾರತೀಯ ನೌಕಾಪಡೆ ಮತ್ತು ಕೋಸ್ಟ್‌ ಗಾರ್ಡ್‌ ನಡೆಸಿದ ತುರ್ತು ಕಾರ್ಯಾಚರಣೆಯಲ್ಲಿ ಜೀವಂತವಾಗಿ ರಕ್ಷಿಸಲಾಯಿತು. ಆದರೆ, ಒಎನ್‌ಜಿಸಿಯ ಮೂವರು ಸಿಬ್ಬಂದಿ ಸೇರಿ ನಾಲ್ವರು ಆಸ್ಪತ್ರೆಗೆ ಕರೆ ತರುವ ವೇಳೆ ಮೃತಪಟ್ಟಿದ್ದಾರೆ. ಮೃತರನ್ನು ಮುಕೇಶ್‌ ಪಟೇಲ್‌, ವಿಜಯ್‌ ಮಂಡ್ಲೋಯ್‌, ಸತ್ಯಂವದ ಪಾತ್ರ ಮತ್ತು ಸಂಜು ಫ್ರಾನ್ಸಿಸ್‌ ಎಂದು ಗುರುತಿಸಲಾಗಿದೆ.

ಘಟನೆಯ ವಿವರ
ಒಎನ್‌ಜಿಸಿಗೆ ಸೇರಿದ ಈ ಹೆಲಿಕಾಪ್ಟರ್‌ ಒಎನ್‌ಜಿಸಿಯ ಆರು ಸಿಬ್ಬಂದಿ, ಖಾಸಗಿ ಕಂಪನಿಯೊಂದ ಉದ್ಯೋಗಿ ಹಾಗೂ ಇಬ್ಬರು ಪೈಲಟ್‌ಗಳನ್ನು ಹೊತ್ತು ಸಾಗುತ್ತಿತ್ತು. ಆಗ ತಾಂತ್ರಿಕ ಸಮಸ್ಯೆ ಉಂಟಾಗಿ ಮುಂಬಯಿ ಸಮೀಪ ಸಮುದ್ರದಲ್ಲಿರುವ ಸಾಗರ್‌ ಕಿರಣ್‌ ರಿಗ್‌ ಬಳಿ ಸಮುದ್ರಕ್ಕೆ ಬಿತ್ತು ಎನ್ನಲಾಗಿದೆ.

ಒಎನ್‌ಜಿಸಿಯ ತೈಲ ಸಂಸ್ಕರಣಾ ಸ್ಥಾವರಗಳು ತೀರದಿಂದ ತುಂಬಾ ದೂರದಲ್ಲಿರುತ್ತವೆ. ಒಎನ್‌ಜಿಸಿಯು ಸಮುದ್ರ ಮಧ್ಯ ಭಾಗದಲ್ಲಿ ಹಲವು ರಿಗ್‌ ಮತ್ತು ಸ್ಥಾವರಗಳನ್ನು ಹೊಂದಿದೆ. ಇಲ್ಲಿ ಕೆಲವು ಸ್ಥಾವರಗಳಲ್ಲಿ ಕಚ್ಚಾ ತೈಲ ಸಂಸ್ಕರಿಸಿ ತೈಲ ಉತ್ಪಾದನೆ ನಡೆಯುತ್ತಿದ್ದರೆ, ಉಳಿದವುಗಳಲ್ಲಿ ತೈಲ ಸಂಗ್ರಹವಿರುತ್ತದೆ.

ಅಲ್ಲಿಗೆ ಹೆಲಿಕಾಪ್ಟರ್‌ ಮೂಲಕ ಸಾಗುವುದು ಸಾಮಾನ್ಯ ದಿನಚರಿ. ಇದರಲ್ಲಿ ಸಿಬ್ಬಂದಿಯನ್ನು ಮತ್ತು ಅಗತ್ಯ ಸಲಕರಣೆಗಳನ್ನು ಸಾಗಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಮಂಗಳವಾರವೂ ಅದೇ ರೀತಿ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಈ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಈ ರೀತಿ ಸಾಗರದ ಭಾಗದಲ್ಲಿ ಕಾರ್ಯಾಚರಿಸುವ ಹೆಲಿಕಾಪ್ಟರ್‌ಗಳಿಗೆ ತುರ್ತು ಸಂದರ್ಭಕ್ಕೆ ಬೇಕು ಎಂಬ ಕಾರಣಕ್ಕೆ ಫ್ಲೋಟರ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಹೆಲಿಕಾಪ್ಟರ್‌ಗೂ ಅಂಥಹುದೇ ಫ್ಲೋಟರ್‌ಗಳಿದ್ದು ಅದನ್ನು ಬಳಸಿಕೊಂಡು ಸಮುದ್ರದಲ್ಲಿ ಇಳಿಸಲಾಗಿದೆ. ಆದರೆ, ಇದು ತಾತ್ಕಾಲಿಕ ಮಾತ್ರ. ತುಂಬ ಹೊತ್ತು ಫ್ಲೋಟರ್‌ಗಳ ಮೇಲೆ ಹೆಲಿಕಾಪ್ಟರ್‌ಗಳನ್ನು ನಿಲ್ಲಿಸಲು ಆಗುವುದಿಲ್ಲ. ಜತೆಗೆ ಸಮುದ್ರಕ್ಕೆ ಅಪ್ಪಳಿಸಿದ ಹೊಡೆತ ಜೋರಾಗಿತ್ತೆಂದು ನಂಬಲಾಗಿದೆ.

ದುರಂತ ಸಂಭವಿಸಿದ ಮಾಹಿತಿ ತಿಳಿಯುತ್ತಲೇ ಕೋಸ್ಟ್‌ ಗಾರ್ಡ್‌ ಮತ್ತು ನೌಕಾಪಡೆಯ ವಿಮಾನಗಳು ಕಾರ್ಯಾಚರಣೆಗೆ ಇಳಿದವು. ಕೂಡಲೇ ಗಾಯಾಳುಗಳನ್ನು ಪವನ್‌ ಹಂಸ್‌ ವಾಯುನೆಲೆಗೆ ಕರೆ ತರಲಾಯಿತು. ಅಲ್ಲಿ ಸಿದ್ಧವಾಗಿ ನಿಂತಿದ್ದ ನಾಲ್ಕು ಆಂಬ್ಯುಲೆನ್ಸ್‌ಗಳ ಮೂಲಕ ನಾನಾವತಿ ಆಸ್ಪತ್ರೆಗೆ ತರಲಾಯಿತು. ಇಲ್ಲಿ ನಾಲ್ವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ಮುಂಬಯಿಯ ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆಯನ್ನು ದೃಢೀಕರಿಸಿದ್ದು, ಆಕಸ್ಮಿಕ ಅವಘಡ ಪ್ರಕರಣ ದಾಖಲಾಗಿದೆ.

ಹಿಂದಿನ ಸುದ್ದಿ| 7 ಪ್ರಯಾಣಿಕರು, ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್‌ ಅರಬ್ಬಿ ಸಮುದ್ರದಲ್ಲಿ ತುರ್ತು ʻಜಲಸ್ಪರ್ಶʼ

Exit mobile version