ನವದೆಹಲಿ: ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿ (Delhi Schools Online Attendance) ಕಡ್ಡಾಯ. ಭೌತಿಕ ಹಾಜರಾತಿಗೆ ಯಾವುದೇ ಮನ್ನಣೆಯಿಲ್ಲ ಎನ್ನುವಂತಹ ಆದೇಶವನ್ನು ನವದೆಹಲಿಯ ಶಿಕ್ಷಣ ಇಲಾಖೆ ಮಾಡಿದೆ. ಪರೀಕ್ಷೆ ಸಮಯದಲ್ಲಿ ಆನ್‌ಲೈನ್ ಹಾಜರಾತಿಯಲ್ಲಿ ಅರ್ಹತೆ ಪಡೆದಿದ್ದರೆ ಮಾತ್ರವೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುವುದು ಎಂದು ಈ ಹೊಸ ಆದೇಶದಲ್ಲಿ ತಿಳಿಸಲಾಗಿದೆ. ದೆಹಲಿಯಲ್ಲಿ ಈಗ ಇದು ಜಾರಿಗೆ ಬರುವುದಾದರೂ ಕ್ರಮೇಣ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇದು ಜಾರಿಯಾಗುವ ಸಾಧ್ಯತೆ ಇದೆ.
ಶಾಲೆಗಳ ಕ್ಲಾಸ್ ಟೀಚರ್‌ಗಳು ಆಯಾ ತರಗತಿಯ ಹಾಜರಾತಿಯನ್ನು ಪಡೆಯಬೇಕು. ಟ್ಯಾಬ್ ಅಥವಾ ಶಾಲೆಯ ಕಂಪ್ಯೂಟರ್ ಅನ್ನು ಬಳಸಿಯೇ ಹಾಜರಾತಿ ಪಡೆದುಕೊಳ್ಳಬೇಕು. ಒಂದು ವೇಳೆ ಶಿಕ್ಷಕರು ಭೌತಿಕವಾಗಿ ಹಾಜರಾತಿಯನ್ನು ಪಡೆದರೆ ಅದನ್ನು ಶಿಕ್ಷಣ ಇಲಾಖೆ ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ. ಶಿಕ್ಷಕರು ಆನ್‌ಲೈನ್‌ನಲ್ಲಿ ಹಾಕಿರುವ ಹಾಜರಾತಿಯನ್ನು ಶಿಕ್ಷಣ ಇಲಾಖೆಯ ಮುಖ್ಯ ಕಚೇರಿಗಳಲ್ಲಿ ಅಧಿಕಾರಿಗಳು ಗಮನಿಸಬಹುದು. ಈ ರೀತಿ ಮಾಡುವುದು ಶಿಕ್ಷಕರಿಗೆ ವಿದ್ಯಾರ್ಥಿಗಳ ಪೋಷಕರೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಿಕೊಳ್ಳುವಲ್ಲಿ ಸಹಕರಿಸಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
ತಿಂಗಳ ಎರಡನೇ ಶನಿವಾರ ಹಾಗೂ ಸರ್ಕಾರಿ ರಜೆ ಇರುವ ಶನಿವಾರಗಳನ್ನು ಹೊರತುಪಡಿಸಿ, ಬೇರೆ ಎಲ್ಲ ಶನಿವಾರಗಳಂದು ಶಾಲೆಗಳಲ್ಲಿ ಶಿಕ್ಷಕರು ಮತ್ತು ಪೋಷಕರ ಸಭೆ ನಡೆಯಬೇಕು. ಆ ಸಭೆಯಲ್ಲಿ ಶಿಕ್ಷಕರು ಮಕ್ಕಳ ಆನ್‌ಲೈನ್ ಹಾಜರಾತಿ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಹಾಜರಾತಿ ವಿಚಾರದಲ್ಲಿ ಪೋಷಕರಿಗೆ ಆಗಾಗ ಕರೆ, ಸಂದೇಶ, ಇಮೇಲ್‌ಗಳ ಮೂಲಕವೂ ಮಾಹಿತಿಯನ್ನು ರವಾನಿಸುತ್ತಿರಬೇಕು ಎಂದು ಹೇಳಲಾಗಿದೆ. ಪೋಷಕರು ಮತ್ತು ಶಿಕ್ಷಕರ ಸಭೆಗಳಲ್ಲಿ ಶಿಕ್ಷಕರು ಪೋಷಕರಿಗೆ ಅವರ ಮಕ್ಕಳ ಹಾಜರಾತಿ ಬಗ್ಗೆ ವಿಶ್ಲೇಷಣೆ ನೀಡಬೇಕು. ಅದರಲ್ಲೂ ವಾರದಲ್ಲಿ ಮೂರು ದಿನಗಳಿಗಿಂತ ಹೆಚ್ಚು ದಿನಗಳ ಕಾಲ ರಜೆ ಹಾಕಿರುವ ವಿದ್ಯಾರ್ಥಿಯ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು ಎಂದು ಆದೇಶದಲ್ಲಿದೆ.
ಹಾಗೆಯೇ ಇನ್ನು ಮುಂದೆ ಶಾಲೆಗಳಲ್ಲಿ ಹೊಸದಾಗಿ ಗಾರ್ಡ್‌ಗಳನ್ನು ನೇಮಕಾತಿ ಮಾಡಲಾಗುವುದು. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸುರಕ್ಷತೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.