ನವದೆಹಲಿ: ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಮೈತ್ರಿ ಸರ್ಕಾರವು ಜಾತಿಗಣತಿ (Caste Census) ಮಾಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ (Supreme Court) ಕೇಂದ್ರ ಸರ್ಕಾರ (Central Government) ಮಹತ್ವದ ಅಫಿಡವಿಟ್ ಸಲ್ಲಿಸಿದೆ. “ಕೇಂದ್ರ ಸರ್ಕಾರದ ಹೊರತಾಗಿ ದೇಶದ ಯಾವುದೇ ರಾಜ್ಯ ಅಥವಾ ಸಂಸ್ಥೆಗಳಿಗೆ ಜಾತಿಗಣತಿ ಕೈಗೊಳ್ಳುವ ಅಧಿಕಾರವೇ ಇಲ್ಲ” ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು ಈಗ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.
ಬಿಹಾರ ಜಾತಿಗಣತಿ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದರು. “ಜನಗಣತಿ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಮಾತ್ರ ಜಾತಿಗಣತಿ ಕೈಗೊಳ್ಳುವ ಅಧಿಕಾರ ಇದೆ. ಬಿಹಾರ ಜಾತಿಗಣತಿಯಿಂದ ಅನೇಕ ಪರಿಣಾಮ ಬೀರುತ್ತದೆ” ಎಂದು ತಿಳಿಸಿದರು.
ಕೇಂದ್ರದ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ
ಅಫಿಡವಿಟ್ ಹಿನ್ನೆಲೆಯಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಕೇಂದ್ರ ಸರ್ಕಾರಕ್ಕೆ ಜ್ಞಾನ ಇಲ್ಲ. ಅವರಿಗೆ ಸತ್ಯವನ್ನು ಮರೆಮಾಚಿ, ಸುಳ್ಳು ಹೇಳುವುದು ಮಾತ್ರ ಗೊತ್ತು. ಹಾಗಾಗಿ, ಅಫಿಡವಿಟ್‌ನಲ್ಲೂ ಜಾತಿಗಣತಿಯನ್ನು ವಿರೋಧಿಸಿದ್ದಾರೆ. ಬಿಜೆಪಿಗೆ ಜಾತಿಗಣತಿ ಬೇಕಾಗಿಲ್ಲ. ಹಾಗೊಂದು ವೇಳೆ ಅವರು ಇದನ್ನು ಬೆಂಬಲಿಸಿದರೆ ದೇಶಾದ್ಯಂತ ಜಾತಿಗಣತಿ ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Congress plenary Session: ಸಾಮಾಜಿಕ ನ್ಯಾಯ ಭದ್ರತೆಗೆ ಜಾತಿಗಣತಿಗೆ ಕಾಂಗ್ರೆಸ್ ಒಲವು; ರಾಯಪುರ ಘೋಷಣೆ
ಬಿಹಾರದಲ್ಲಿ ಜಾತಿಗಣತಿ ಏಕೆ?
ಬಿಹಾರದಲ್ಲಿರುವ ದಲಿತರು, ಹಿಂದುಳಿದ ವರ್ಗಗಳ ನಿಖರ ಮಾಹಿತಿ ಪಡೆದು, ಅವರ ಏಳಿಗೆ ದಿಸೆಯಲ್ಲಿ ಯೋಜನೆ ಜಾರಿಗೆ ತರಬೇಕು ಎಂಬುದು ರಾಜ್ಯ ಸರ್ಕಾರದ ಚಿಂತನೆಯಾಗಿದೆ. ಹಾಗಾಗಿ, ರಾಜ್ಯದ 12.70 ಕೋಟಿ ಜನರ ಜಾತಿಗಣತಿ ಮಾಡಲು ಮುಂದಾಗಿದೆ. 38 ಜಿಲ್ಲೆಗಳು, 2.58 ಕೋಟಿ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಲು ತೀರ್ಮಾನ ತೆಗೆದುಕೊಂಡಿದೆ. ಅಭಿವೃದ್ಧಿ ಯೋಜನೆ ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಲಿತರು, ಒಬಿಸಿ ಮತಗಳನ್ನು ಸೆಳೆಯುವುದು ಕೂಡ ಮೈತ್ರಿ ಸರ್ಕಾರದ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.