ಯುದ್ಧನೆಲವಾದ ಸುಡಾನ್ (Sudan Conflict)ನಿಂದ ಭಾರತೀಯರನ್ನು ರಕ್ಷಣೆ ಮಾಡಿ ವಾಪಸ್ ಕರೆತರುತ್ತಿರುವ ಕಾರ್ಯಾಚರಣೆ ‘ಆಪರೇಶನ್ ಕಾವೇರಿ (Operation Kaveri)’ ಚುರುಕಾಗಿ ನಡೆಯುತ್ತಿದೆ. 3000ಕ್ಕೂ ಹೆಚ್ಚು ಭಾರತೀಯರು ಸುಡಾನ್ನಲ್ಲಿ ಇದ್ದಾರೆ. ಅವರನ್ನೆಲ್ಲ ಹಂತಹಂತವಾಗಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ಭಾರತಕ್ಕೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡಿದೆ. ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಭಾರತೀಯರನ್ನು ಕರೆತರುವ ಸಲುವಾಗಿ ನೌಕಾಪಡೆಯ ಹಡಗುಗಳನ್ನು, ವಾಯುಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ. ಜೆಡ್ಡಾಕ್ಕೆ ಬಂದ ಭಾರತೀಯರನ್ನು ಐಎಎಫ್ ವಿಮಾನಗಳ ಮೂಲಕ ಭಾರತಕ್ಕ ಕರೆತರಲಾಗುತ್ತಿದೆ. ಇದುವರೆಗೆ ಸುಡಾನ್‌ನಿಂದ 1400 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ.
ಇಂದು ಸುಡಾನ್‌ನಿಂದ ಐಎಎಫ್ನ ಸಿ-130 ಜೆ ಸರಣಿಯ ಎರಡು ವಿಮಾನಗಳಲ್ಲಿ ಒಟ್ಟು 260 ಪ್ರಯಾಣಿಕರನ್ನು ಜೆಡ್ಡಾಕ್ಕೆ ಕರೆತರಲಾಗಿದೆ. ಅದರಲ್ಲಿ ಹಲವರು ವೃದ್ಧರಿದ್ದಾರೆ. ಒಬ್ಬರು 90 ವರ್ಷ ವಯಸ್ಸಿನವರು ಇದ್ದರೆ, ಇನ್ನೊಬ್ಬರಿಗೆ 102 ವರ್ಷವಾಗಿದೆ ಎಂದು ಇಂಡಿಯನ್ ಏರ್ಪೋರ್ಸ್ ತಿಳಿಸಿದೆ. ಇನ್ನು ಜೆಡ್ಡಾಕ್ಕೆ ಬಂದು ತಲುಪಿದ್ದ ಭಾರತೀಯರಲ್ಲಿ 186ಜನರನ್ನು ಹೊತ್ತ ವಿಮಾನವೊಂದು ಇಂದು ಬೆಳಗ್ಗೆ ಕೊಚ್ಚಿ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಿದೆ. ಇದು ಭಾನುವಾರ ಜೆಡ್ಡಾದಿಂದ ಹೊರಟಿತ್ತು. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: Operation Kaveri: ಸುಡಾನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ದಾಂಡೇಲಿ ಯುವಕರು
ಸುಡಾನ್ನಲ್ಲಿ 3000ದಷ್ಟು ಭಾರತೀಯರು ಇದ್ದಾರೆಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲಿನ ಖಾರ್ಟೌಮ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳುವ ಪ್ರಕಾರ ಈ 3000 ಮಂದಿಯಲ್ಲಿ 2800 ಮಂದಿ ಈತ್ತೀಚಿನ ವರ್ಷಗಳಲ್ಲಿ ಹೋಗಿ ಅಲ್ಲಿ ನೆಲೆ ನಿಂತವರಾದರೆ, ಸುಮಾರು 1200 ಭಾರತೀಯರು ಕಳೆದ 150ವರ್ಷಗಳಿಂದ ಸುಡಾನ್ನಲ್ಲಿ ಇದ್ದವರು. ಹೀಗೆ ಭಾರತಕ್ಕೆ ಬರುವವರನ್ನು ಕರೆದುಕೊಂಡು ಬರಲು ಭಾರತೀಯ ವಾಯುಪಡೆಯ ವಿಮಾನಗಳೊಂದಿಗೆ ಇಂಡಿಗೊದ ಎರಡು ವಿಮಾನಗಳೂ ಕೂಡ ಕಾರ್ಯಾಚರಣೆ ನಡೆಸುತ್ತಿವೆ. ಆಪರೇಶನ್ ಕಾವೇರಿಯ ಭಾಗವಾಗಿ ಜೆಡ್ಡಾ-ದೆಹಲಿ ಮತ್ತು ಜೆಡ್ಡಾ-ಬೆಂಗಳೂರು ಮಾರ್ಗದಲ್ಲಿ ವಿಮಾನಗಳು ಸಂಚರಿಸುತ್ತಿವೆ. ಸುಡಾನ್ನಲ್ಲಂತೂ ಯುದ್ಧ ತೀವ್ರಗೊಂಡಿದೆ. ಸೇನಾ ಪಡೆಗಳು ಮತ್ತು ಅರೆಸೇನಾ ಪಡೆಗಳ ಕಾದಾಟಕ್ಕೆ 528 ಮಂದಿ ಮೃತಪಟ್ಟಿದ್ದಾರೆ.