ಜೆಡ್ಡಾ: ಯುದ್ಧ ಪೀಡಿತ ಸುಡಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ಪ್ರಾರಂಭಿಸಿರುವ ‘ಆಪರೇಶನ್ ಕಾವೇರಿ (Operation Kaveri)’ ಶರವೇಗದಲ್ಲಿ ನಡೆಯುತ್ತಿದೆ. 135 ಭಾರತೀಯರನ್ನು ಹೊತ್ತ ಐಎಎಫ್ ಸಿ-130ಜೆ ವಿಮಾನ ಈಗಾಗಲೇ ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣವನ್ನು ತಲುಪಿದೆ. ಇದು ಪೋರ್ಟ್ ಸುಡಾನ್ನಿಂದ ಹೊರಟ ಭಾರತೀಯರ ಮೂರನೇ ಬ್ಯಾಚ್. ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಜೆಡ್ಡಾದಲ್ಲಿಯೇ ಇದ್ದು, ಸುಡಾನ್ನಿಂದ ಅಲ್ಲಿಗೆ ಆಗಮಿಸುವ ಭಾರತೀಯರನ್ನು ಏರ್ಪೋರ್ಟ್ನಲ್ಲಿ ಬರಮಾಡಿಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.
ಆಪರೇಶನ್ ಕಾವೇರಿ ಕಾರ್ಯಾಚರಣೆಯ ಮೊದಲ ಹಂತದಲ್ಲಿ ಐಎನ್ಎಸ್ ಸುಮೇಧಾ ಹಡಗಿನ ಮೂಲಕ 278 ಭಾರತೀಯರನ್ನು ಪೋರ್ಟ್ ಸುಡಾನ್ನಿಂದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ಭಾರತಕ್ಕೆ ಕಳಿಸಲಾಗುತ್ತಿದೆ. ಹಾಗೇ, ಎರಡನೇ ಹಂತದಲ್ಲಿ ಐಎಎಫ್ ಸಿ-130ಜೆ ವಿಮಾನ 148 ಭಾರತೀಯರನ್ನು ಸುಡಾನ್ನಿಂದ ಸೌದಿಗೆ ಕರೆತಂದಿದೆ. ಇವರನ್ನೂ ಕೂಡ ವಿ.ಮುರಳೀಧರನ್ ಖುದ್ದು ಹಾಜರಿದ್ದು ಬರಮಾಡಿಕೊಂಡಿದ್ದರು. ಇದೀಗ ಮೂರನೇ ಬ್ಯಾಚ್ನಲ್ಲಿ 135 ಮಂದಿ ಜೆಡ್ಡಾಕ್ಕೆ ಬಂದಿದ್ದಾರೆ. ಇವರ ಭಾರತ ಪ್ರಯಾಣವೂ ಶೀಘ್ರವೇ ಪ್ರಾರಂಭವಾಗಲಿದೆ ಎಂದು ವಿ.ಮುರಳೀಧರನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸುಡಾನ್ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ದೇಶ ರಕ್ಷಣೆ ಮಾಡಬೇಕಾದವರೇ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಪರಿಣಾಮ ಈಗಾಗಲೇ ಅಲ್ಲಿನ ಸುಮಾರು 400 ಮಂದಿ ಸಾವನ್ನಪ್ಪಿದ್ದಾರೆ. ಭಾರತ, ಸೌದಿ ಅರೇಬಿಯಾ, ಅಮೆರಿಕ ಮತ್ತು ಇತರ ದೇಶಗಳ ಜನರು ಸುಡಾನ್ನಲ್ಲಿದ್ದು, ಅವರ ರಕ್ಷಣಾ ಕಾರ್ಯಾಚರಣೆಯನ್ನು ಆಯಾ ದೇಶಗಳು ನಡೆಸುತ್ತಿವೆ. ಹೀಗೆ ಬೇರೆ ದೇಶಗಳ ನಾಗರಿಕರ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಬೇಕಾಗಿರುವ ಕಾರಣಕ್ಕೆ ಸುಡಾನ್ ಸೋಮವಾರದಿಂದ 72ಗಂಟೆಗಳ ಕಾಲ ಕದನ ವಿರಾಮ ಘೋಷಿಸಿಕೊಂಡಿದೆ. ಭಾರತದ ಸುಮಾರು 3000 ಜನರು ಸುಡಾನ್ನಲ್ಲಿದ್ದು, ಅವರೆಲ್ಲರನ್ನೂ ಭಾರತಕ್ಕೆ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Sudan crisis : ಸೇನಾಪಡೆ ಮತ್ತು ಅರೆ ಸೇನಾಪಡೆ ನಡುವಿನ ಕಾಳಗಕ್ಕೆ ತತ್ತರಿಸಿದ ಬಡ ಸುಡಾನ್, ಏನಿದರ ಹಿನ್ನೆಲೆ?