Site icon Vistara News

Operation TRS MLAs | ಕಮಲದಿಂದ ಶಾಸಕರ ಖರೀದಿ- ಟಿಆರ್‌ಎಸ್ ಆರೋಪ, ಇದೊಂದು ಡ್ರಾಮಾ ಎಂದ ಬಿಜೆಪಿ

TRS

ಟಿಆರ್‌ಎಸ್ ಶಾಸಕರನ್ನು ಬಿಜೆಪಿ ಪರವಾಗಿ ಖರೀದಿಸಲು ಮುಂದಾಗಿದ್ದ ವ್ಯಕ್ತಿಗಳು.

ಹೈದರಾಬಾದ್:‌ ತೆಲಂಗಾಣದಲ್ಲಿ ಬಿಜೆಪಿಯು 2019ರಿಂದಲೂ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (TRS)ಯ ಶಾಸಕರನ್ನು ಖರೀದಿಸಲು “ಆಪರೇಷನ್‌ ಕಮಲ”ಕ್ಕೆ ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಟಿಆರ್‌ಎಸ್‌ನ ನಾಲ್ವರು ಶಾಸಕರ ಖರೀದಿಗೆ (Operation TRS MLAs) 100-150 ಕೋಟಿ ರೂ. ಆಫರ್‌ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಇದೊಂದು ಸಿಎಂ ಕೆಸಿಆರ್ ನಿರ್ದೇಶಿತ ಡ್ರಾಮಾ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಭೇದಿಸಲಾಗಿದ್ದು, ಫಾರ್ಮ್‌ಹೌಸ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಶಾಸಕರ ಖರೀದಿಗಾಗಿ 100-150 ಕೋಟಿ ರೂ. ಆಫರ್‌ ನೀಡಲು ಮುಂದಾಗಿದ್ದರು. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ಹೈದರಾಬಾದ್‌ ಪೊಲೀಸ್‌ ಆಯುಕ್ತ ಸ್ಟೀಫನ್‌ ರವೀಂದ್ರ ಮಾಹಿತಿ ನೀಡಿದರು.

ಆಫರ್‌ ಪಡೆದ ಶಾಸಕರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಪೊಲೀಸರು ಅಜೀಜ್‌ ನಗರದ ಫಾರ್ಮ್ಸ್‌ಹೌಸ್‌ ಮೇಲೆ ದಾಳಿ ನಡೆಸಿದ್ದಾರೆ. ಬಂಧಿತರನ್ನು ಹರಿಯಾಣದ ಅರ್ಚಕ ಸತೀಶ್‌ ಶರ್ಮಾ, ತಿರುಪತಿ ಅರ್ಚಕ ಡಿ.ಸಿಂಹಯಾಜಿ ಹಾಗೂ ಸಿಂಹಯಾಜಿ ಶಿಷ್ಯ ರೋಹಿತ್‌ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ನಕಲಿ ಗುರುತಿನ ಚೀಟಿಗಳನ್ನು ಇಟ್ಟುಕೊಂಡು ನಗರದಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇವರು ಯಾವ ಪಕ್ಷದ ಪರವಾಗಿ ಶಾಸರಕನ್ನು ಖರೀದಿಸಲು ಮುಂದಾಗಿದ್ದರು ಎಂಬುದು ತಿಳಿದುಬಂದಿಲ್ಲ.

ಯಾರಿಗೆ ಆಮಿಷ?
ಶಾಸಕರಾದ ಗುವ್ವಾಳು ಬಾಲರಾಜ(ಅಚಮ್‌ಪೇಟ), ಹರ್ಷವರ್ಧನ್ ರೆಡ್ಡಿ(ಕಲ್ಲಾಪುರ), ರೇಗಾ ಕಾಂತರಾವ್(ಪಿನಪಾಕ), ಪೈಲಟ್ ರೋಹಿತ್ ರೆಡ್ಡಿ (ತಾಂಡೂರು) ಅವರಿಗೆ ಬಂಧಿತ ತಂಡವು ಬಿಜೆಪಿ ಸೇರುವ ಆಮಿಷವೊಡ್ಡಿತ್ತು ಎಂದು ಆರೋಪಿಸಲಾಗಿದೆ.

ಈ ಹೈ ಡ್ರಾಮಾ ಮುಗಿದ ಬಳಿಕ ಮಾತನಾಡಿದ ಟಿಆರ್‌ಎಸ್ ಶಾಸಕ ಗುವ್ವಾಲಾ ಬಾಲರಾಜ ಅವರು, ಎಷ್ಟೇ ಕಷ್ಟವಾದರೂ ಸರಿ, ಎಷ್ಟೇ ತಾಪತ್ರಯವಾದರೂ ಸರಿ ತೆಲಂಗಾಣದಲ್ಲಿ ಇಂಥ ಅವ್ಯವಸ್ಥೆಗೆ ಅವಕಾಶ ಮಾಡಿಕೊಡುವುದಿಲ್ಲ. ಟಿಆರ್‌ಎಸ್ ನಾಯಕ ಕೆ. ಚಂದ್ರಶೇಖರ್ ರಾವ್ ಅವರ ನೇತೃತ್ವದಲ್ಲಿ ಇಂಥ ಡೀಲ್ ಮಾಡುವ ಸ್ವಾರ್ಥ ರಾಜಕಾರಣಿಗಳನ್ನು ಬಯಲು ಮಾಡಿ, ದೇಶದಲ್ಲಿನ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುತ್ತೇವೆ ಎಂದು ಶಾಸಕರು ಹೇಳಿದರು.

ಇದೊಂದು ಡ್ರಾಮಾ-ಬಿಜೆಪಿ
ಏತನ್ಮಧ್ಯೆ, ಟಿಆರ್‌ಎಸ್ ಆಪರೇಷನ್ ಕಮಲ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು, ಟಿಆರ್‌ಎಸ್ ಅನ್ನು ಡ್ರಾಮಾ ಕಂಪನಿ ಎಂದು ಜರಿದಿದ್ದಾರೆ. ಟಿಆರ್‌ಎಸ್ ಹೇಳುತ್ತಿರುವ ಕತೆಗಳನ್ನು ಕೇಳಿ ಜನರು ನಗುತ್ತಾರೆ. ಫಾರ್ಮ್‌ಹೌಸ್‌ನಲ್ಲಿ ಬಿಜೆಪಿಯವರು ಆಮಿಷ ಒಡ್ಡಿದರು ಎಂದು ಹೇಳುತ್ತಾರಲ್ಲ, ಹಾಗಿದ್ದರೆ ಆಮಿಷ ಒಡ್ಡಿದವರು ಹೆಸರನ್ನು ಬಹಿರಂಗಪಡಿಸಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Telangana battle | ತೆಲಂಗಾಣದ ಮುನುಗೋಡೆ ಉಪಚುನಾವಣೆಯಲ್ಲಿ ಟಿಆರ್‌ಎಸ್-ಬಿಜೆಪಿ ಹಣಾಹಣಿ

Exit mobile version