Site icon Vistara News

Congress : ಜೂ. 23ರಂದು ಪ್ರತಿಪಕ್ಷಗಳ ಸಭೆ, ರಾಹುಲ್, ಖರ್ಗೆ, ಮಮತಾ ಭಾಗಿ

JDU Leader

#image_title

ನವ ದೆಹಲಿ: ಪಾಟ್ನಾದಲ್ಲಿ ಜೂನ್ 12ರಂದು ನಡೆಯಬೇಕಾಗಿದ್ದ ಪ್ರತಿಪಕ್ಷಗಳ ಸಭೆಯನ್ನು ಜೂನ್​ 23ಕ್ಕೆ ಮುಂದೂಡಿಕೆ ಮಾಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಹಾರ ರಾಜಧಾನಿ ಪಟನಾದಲ್ಲಿ ಉದ್ದೇಶಿತ ಸಭೆ ನಡೆಯಲಿದೆ ಎಂದು ಮಹಾಮೈತ್ರಿ ನಾಯಕರು ಬುಧವಾರ ಘೋಷಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎಯನ್ನು ಮಣಿಸಲು ಸಂಯೋಜಿತ ಬಿಜೆಪಿ ವಿರೋಧಿ ರಂಗವನ್ನು ರಚಿಸಲು ಪ್ರತಿಪಕ್ಷಗಳ ನಾಯಕರು ಜೂನ್ 23ರಂದು ನಡೆಯುವ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಾಜನ್ ಸಿಂಗ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಮಾಹಿತಿ ನೀಡಿದ್ದಾರೆ.

ನಾವು ಜೂನ್ 23ರಂದು ಪಾಟ್ನಾದಲ್ಲಿ ಕಾಂಗ್ರೆಸ್ ಉನ್ನತ ನಾಯಕರು ಸೇರಿದಂತೆ ಪ್ರಮುಖ ಪ್ರತಿ ಪಕ್ಷಗಳು ಮತ್ತು ಸಮಾನ ಮನಸ್ಕ ಪಕ್ಷಗಳ ಸಭೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಭೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ, ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಸಿಪಿಎಂನ ಸೀತಾರಾಮ್ ಯೆಚೂರಿ ಸೇರಿದಂತೆ ಎಡ ಪಕ್ಷದ ಉನ್ನತ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಿಪಿಐನ ಡಿ ರಾಜಾ ಮತ್ತು ಸಿಪಿಐ-ಎಂಎಲ್ (ಲಿಬರೇಷನ್) ನ ದೀಪಂಕರ್ ಭಟ್ಟಾಚಾರ್ಯ ಮತ್ತಿತರರೂ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಿಜೆಪಿಯ ನಿರಂಕುಶ ಆಡಳಿತದ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ಒಗ್ಗಟ್ಟಾಗುತ್ತಿವೆ. ಈ ಸಭೆ ದೇಶದಲ್ಲೇ ರಾಜಕೀಯ ಇತಿಹಾಸದಲ್ಲಿ ದಾಖಲೆ ಎನಿಸಿಕೊಳ್ಳಲಿದೆ ಎಂದು ಜೆಡಿಯು ತೇಜಸ್ವಿ ಯಾದವ್​ ಹೇಳಿದರು. ಬಿಜೆಪಿ ನೇತೃತ್ವದ ಎನ್​​ಡಿಎ ಆಡಳಿತದಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರಿಗೆ ಕಿರುಕುಳ ನೀಡಲಾಗುತ್ತಿದೆ” ಎಂದು ತೇಜಸ್ವಿ ಹೇಳಿದ್ದಾರೆ.

ಸ್ಥಾನ ಹಂಚಿಕೆಯ ಗೊಂದಲ

ಉದ್ದೇಶಿತ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಕಾಂಗ್ರೆಸ್​ ಮುಂದಾಗಿರುವ ಹೊರತಾಗಿಯೂ ಇತರ ಪಕ್ಷಗಳೊಂದಿಗಿನ ಹೊಂದಾಣಿಕೆ ವಿಚಾರದಲ್ಲಿ ಆಂತರಿಕ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಗೊಂದಲವಿದೆ ಎಂಬ ವರದಿಗಳಿವೆ.

ಇದನ್ನೂ ಓದಿ : MLC Election: ಕಾಂಗ್ರೆಸ್‌ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್‌ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!

ಕಾಂಗ್ರೆಸ್​​ ರಾಷ್ಟ್ರವ್ಯಾಪಿ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಬೇಕೆಂಬ ಅಭಿಪ್ರಾಯ ಪ್ರತಿಪಕ್ಷಗಳದ್ದು. ಆದರೆ, ಕಾಂಗ್ರೆಸ್ ಮಅತ್ರ 350ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಅಸಾಧ್ಯ ಎಂದಿದೆ ಎನ್ನಲಾಗಿದೆ. ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ಗೆ ಕಡಿಮೆ ಕ್ಷೇತ್ರಗಳನ್ನು ನೀಡಲಾಗುತ್ತದೆ ಎಂಬ ಪ್ರಸ್ತಾಪಕ್ಕೂ ರಾಷ್ಟ್ರೀಯ ಪಕ್ಷದ ವಿರೋಧವಿದೆ.

ಜೆಡಿಯು ಮುಖ್ಯ ವಕ್ತಾರ ಕೆ.ಸಿ.ತ್ಯಾಗಿ ಅವರು ಉದ್ದೇಶಿತ ಮೈತ್ರಿಕೂಟಕ್ಕೆ ಸೇರುವ ಪ್ರತಿಯೊಬ್ಬರೂ ಸೀಟು ಹಂಚಿಕೆಯ ವಿಷಯದಲ್ಲಿ ತ್ಯಾಗ ಮಾಡಬೇಕು ಎಂದು ಹೇಳಿದ್ದರು.

Exit mobile version