Site icon Vistara News

Opposition Leader: ಜಾರ್ಖಂಡ್‌ನಲ್ಲೂ ಕರ್ನಾಟಕದ್ದೇ ಸ್ಥಿತಿ; 4 ವರ್ಷ ಬಳಿಕ ವಿಪಕ್ಷ ನಾಯಕನ ಆಯ್ಕೆ!

Jharkhand assembly amar bauri

ಹೊಸದಿಲ್ಲಿ: ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಕೊನೆಗೂ ಜಾರ್ಖಂಡ್ ವಿಧಾನಸಭೆಗೆ ವಿರೋಧ ಪಕ್ಷದ ನಾಯಕನನ್ನು (opposition leader) ಆಯ್ಕೆ ಮಾಡಲಾಗುತ್ತಿದೆ. ಕರ್ನಾಟಕದಂತೆಯೇ ಅಲ್ಲೂ ನಾಯಕತ್ವದ ಶೋಚನೀಯ ಸ್ಥಿತಿಯನ್ನು ಬಿಜೆಪಿ ಎದುರಿಸುತ್ತಿತ್ತು.

ಇತ್ತ ಕರ್ನಾಟಕದಲ್ಲೂ ಬಿಜೆಪಿ ಇದೇ ಸ್ಥಿತಿಯನ್ನು ಎದುರಿಸುತ್ತಿದ್ದು, ಹೊಸ ಸರ್ಕಾರ ರಚನೆಯಾಗಿ ಐದು ತಿಂಗಳಾಗಿದ್ದರೂ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಜಾರ್ಖಂಡ್‌ ಮತ್ತು ಕರ್ನಾಟಕದ ಸ್ಥಿತಿಯನ್ನು ಸಾಮಾಜಿಕ ತಾಣಗಳಲ್ಲಿ ಹೋಲಿಕೆ ಮಾಡಿರುವ ಹಲವರು ʼʼಕರ್ನಾಟಕ ಬಿಜೆಪಿಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಇನ್ನೂ ನಾಲ್ಕು ವರ್ಷ ಸಮಯವಿದೆʼʼ ಎಂದು ಕಾಲೆಳೆದಿದ್ದಾರೆ.

ಜಾರ್ಖಂಡ್‌ನ ವಿಪಕ್ಷ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮಾಜಿ ಸಚಿವ ಅಮರ್ ಬೌರಿ ಅವರನ್ನು ತನ್ನ ಹೊಸ ಶಾಸಕಾಂಗ ಪಕ್ಷದ ನಾಯಕ ಎಂದು ಹೆಸರಿಸಿದೆ. ಹೀಗಾಗಿ ಜಾರ್ಖಂಡ್ ವಿಧಾನಸಭೆಯ ಮುಂದಿನ ಅಧಿವೇಶನವು ನಾಲ್ಕು ವರ್ಷಗಳ ನಂತರ ಪ್ರತಿಪಕ್ಷದ ನಾಯಕನೊಂದಿಗೆ ನಡೆಯುವ ಸಾಧ್ಯತೆಯಿದೆ.

ಬೌರಿ, ಚಂದಂಕಿಯಾರಿನ ಎರಡು ಅವಧಿಯ ಶಾಸಕ. ಬಾಬುಲಾಲ್ ಮರಾಂಡಿ ಅವರ ವಿಪಕ್ಷ ನಾಯಕ ಸ್ಥಾನವನ್ನು ಸ್ಪೀಕರ್‌ ಮಾನ್ಯ ಮಾಡಿಲ್ಲ. 10ನೇ ಶೆಡ್ಯೂಲ್ ಅಡಿಯಲ್ಲಿ ಇವರ ವಿರುದ್ಧ ಅನರ್ಹತೆಯ ಅರ್ಜಿಯ ಸಲ್ಲಿಕೆಯಾಗಿದ್ದು, ಅದನ್ನು ಸ್ಪೀಕರ್‌ ಟ್ರಿಬ್ಯೂನಲ್‌ ಇನ್ನೂ ತೀರ್ಮಾನಿಸದ ಕಾರಣ ಮರಾಂಡಿಗೆ ಇದುವರೆಗೆ ವಿಪಕ್ಷ ನಾಯಕನ ಸ್ಥಾನಮಾನ ನೀಡಿಲ್ಲ.

ಡಿಸೆಂಬರ್ 2019ರಿಂದ 5ನೇ ರಾಜ್ಯ ವಿಧಾನಸಭೆಯ ಹನ್ನೊಂದು ಅಧಿವೇಶನಗಳು ವಿಪಕ್ಷ ನಾಯಕನಿಲ್ಲದೆ ಕಾರ್ಯನಿರ್ವಹಿಸಿವೆ. ಬಿಜೆಪಿಯ ಹೊಸ ನಿರ್ಧಾರ ಮುಂಬರುವ ಚಳಿಗಾಲದ ಅಧಿವೇಶನಕ್ಕೆ ವಿರೋಧ ಪಕ್ಷಕ್ಕೆ ಒಂದು ನಾಯಕನನ್ನು ತಂದಿದೆ. ಜೊತೆಗೆ ಪಕ್ಷವು ಜೆಪಿ ಪಟೇಲ್ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ವಿಪ್ ಎಂದು ಹೆಸರಿಸಿದೆ. ಅವರ ಹೆಸರನ್ನು ಕೇಂದ್ರ ನಾಯಕತ್ವವು ಅಂತಿಮಗೊಳಿಸಿದೆ.

ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸುವ ಕುರಿತು ಜುಲೈನಲ್ಲಿ ಶಾಸಕರನ್ನು ಭೇಟಿಯಾಗಿದ್ದ ಕೇಂದ್ರ ಸಚಿವ ಅಶ್ವನಿ ಚೌಬೆ ಅವರು ಕೇಂದ್ರ ನಾಯಕತ್ವಕ್ಕೆ ಸಲ್ಲಿಸಿದ ವರದಿಯ ಪ್ರಕಾರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮರಾಂಡಿಯನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಉನ್ನತೀಕರಿಸಲಾಗಿದೆ.

ಬಿಜೆಪಿಯು ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಬೌರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದರೊಂದಿಗೆ, ಆದಿವಾಸಿ-ದಲಿತರು-ಒಬಿಸಿಗಳ ಸಾಮಾಜಿಕ ಸಂಯೋಜನೆಯಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. ಅಲ್ಲಿನ ಬಿಜೆಪಿಯ ಮುಖ್ಯ ಸಚೇತಕ ಬಿರಾಂಚಿ ನಾರಾಯಣ್ ಕೂಡ ಜೆಪಿ ಪಟೇಲ್ ಅವರಂತೆ ಒಬಿಸಿ ಗುಂಪಿಗೆ ಸೇರಿದವರು.

ಇದನ್ನೂ ಓದಿ: Karnataka Politics : ಬೊಮ್ಮಾಯಿಗಿಲ್ಲ ವಿಪಕ್ಷ ನಾಯಕ ಸ್ಥಾನ? ಒಂಟಿ ಮಾಡಿದ ಜಂಟಿ ಪ್ರೆಸ್‌ಮೀಟ್‌!

Exit mobile version