2024ರ ಲೋಕಸಭಾ ಚುನಾವಣೆ (2024 Lok Sabha Election)ಯನ್ನು ಒಗ್ಗಟ್ಟಾಗಿ ಎದುರಿಸಲು ಸಜ್ಜಾಗಿರುವ ಪ್ರತಿಪಕ್ಷಗಳ ನಾಯಕರೆಲ್ಲ ಸೇರಿ ಇಂದು ಪಾಟ್ನಾದಲ್ಲಿ ಸಭೆ (Opposition Meet) ಸೇರಿದ್ದಾರೆ. ಈಗಾಗಲೇ ಸಭೆ ಪ್ರಾರಂಭವಾಗಿದ್ದು, ಇದರ ಮುಖ್ಯ ರೂವಾರಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar). ಇವರೇ ಮುಂದಾಗಿ ಪ್ರತಿಪಕ್ಷಗಳ ಸಭೆಯನ್ನು ಆಯೋಜಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP), ಶಿವಸೇನೆ ಉದ್ಧವ್ ಠಾಕ್ರೆ ಬಣ, ದ್ರಾವಿಡ ಮುನ್ನೇತ್ರ ಕಳಗಂ (DMK), ಸಮಾಜವಾದಿ ಪಾರ್ಟಿ, ನ್ಯಾಶನಲ್ ಕಾನ್ಫರೆನ್ಸ್ (NC), ಜಾರ್ಖಂಡ್ ಮುಕ್ತಿ ಮೋರ್ಚಾ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಸಿಪಿಐ, ಸಿಪಿಎಂ, ಸಿಪಿಐ ಎಂಎಲ್, ಜನತಾ ದಳ ಯುನೈಟೆಡ್, ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷಗಳು ಒಂದಾಗಿದ್ದು, ಇಂದಿನಿ ಸಭೆಯಲ್ಲಿ ಈ ಪಕ್ಷಗಳ ಮುಖ್ಯಸ್ಥರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಶರದ್ ಪವಾರ್, ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಮೆಹಬೂಬಾ ಮುಫ್ತಿ ಮತ್ತಿತರರು ಈಗಾಗಲೇ ಪಾಟ್ನಾ ತಲುಪಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯೊಟ್ಟಿಗೆ ರಾಹುಲ್ ಗಾಂಧಿ ಕೂಡ ಉಪಸ್ಥಿತರಿರುವರು.
ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯನ್ನು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಪಾಟ್ನಾದ ಬಿಜೆಪಿ ಕಚೇರಿ ಎದುರು ದೊಡ್ಡದೊಡ್ಡ ಪೋಸ್ಟರ್, ಬ್ಯಾನರ್ಗಳನ್ನು ಹಾಕಲಾಗಿದ್ದು, ಅದರಲ್ಲಿ ಈ ಸಭೆ ಬಗ್ಗೆ ಟೀಕಾತ್ಮಕ ಹೇಳಿಕೆಗಳನ್ನು ಬರೆಯಲಾಗಿದೆ. ಇದೆಲ್ಲದರ ಮಧ್ಯೆ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿ ‘ಪಾಟ್ನಾದಲ್ಲಿ ಇಂದು ಒಂದು ಫೋಟೊ ಸೆಷನ್ ನಡೆಯುತ್ತಿದೆ. ಪ್ರತಿಪಕ್ಷಗಳ ನಾಯಕರೆಲ್ಲ ಸೇರಿ ಪ್ರಧಾನಿ ಮೋದಿಯವರಿಗೆ ಸವಾಲು ಹಾಕಲು ಹೊರಟಿದ್ದಾರೆ. ಆದರೆ ನನಗೆ ಸ್ಪಷ್ಟವಾಗಿ ಗೊತ್ತಿದೆ, ಪ್ರತಿಪಕ್ಷಗಳ ನಾಯಕರು ಏನೇ ಮಾಡಿದರೂ ಅವರು ಒಗ್ಗಟ್ಟಾಗಿ ಇರಲು ಸಾಧ್ಯವೇ ಇಲ್ಲ. ಅವರು ಹೋಗಿ ಜನರನ್ನೇ ಎದುರಿಸಲಿ. ನೋಡುತ್ತಿರಿ, ಮುಂದಿನ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲುತ್ತದೆ. 300ಕ್ಕೂ ಅಧಿಕ ಸೀಟ್ ಗೆಲ್ಲುವ ಮೂಲಕ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: Opposition Meet: ಪಾಟ್ನಾದಲ್ಲಿ ನಾಳೆ ಪ್ರತಿಪಕ್ಷಗಳ ಸಭೆ; ಮೋದಿ ವಿರುದ್ಧ ತೊಡೆ ತಟ್ಟಿದ ನಾಯಕರು!