ನವದೆಹಲಿ: ಚಳಿಗಾಲದ ಅಧಿವೇಶನ (Winter Parliament Session) ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಪ್ರತಿಪಕ್ಷಗಳ (Opposition Parties) ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Union Minister Pralhad Joshi), ”ಲೋಕಸಭೆಯಿಂದ ಸಂಸದರನ್ನು ಅಮಾನತು ಮಾಡುವ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ಕೆಲವು ಸದಸ್ಯರ ವಿರುದ್ಧ ಕ್ರಮಕೈಗೊಂಡ ಬಳಿಕ, ಪ್ರತಿಪಕ್ಷದ ಸದಸ್ಯರು ತಮ್ಮನ್ನೂ ಸಸ್ಪೆಂಡ್ ಮಾಡುವ ಮನವಿಯೊಂದಿಗೆ ಆಗಮಿಸಿದ್ದರು(requested to suspend)” ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಶಿ ಅವರು, ಸಂಸತ್ತಿನ ಎರಡೂ ಸದನಗಳು ಒಪ್ಪಿಗೆ ನೀಡಿರುವ ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ತಪ್ಪುಗಳಿವೆ ಎನ್ನುವುದಾದರೆ ಪ್ರತಿಪಕ್ಷದ ಸದಸ್ಯರು ನ್ಯಾಯಾಲಯದ ಮೊರೆ ಹೋಗಲು ಸ್ವತಂತ್ರರಾಗಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ನಾವು ಸಂಸದರನ್ನು ಅಮಾನತು ಮಾಡಲು ಬಯಸಿರಲಿಲ್ಲ. ನಾವು ಅವರಿಗೆ ಮನವಿ ಮಾಡಿದ್ದೆವು. ಆದರೆ ನಾವು ಕೆಲವು ಸಂಸದರನ್ನು ಅಮಾನತುಗೊಳಿಸಿದ ನಂತರ, ಅವರ ಹಲವಾರು ಸಹೋದ್ಯೋಗಿಗಳು ಅಮಾನತು ಕೋರಿ ಮನವಿಯೊಂದಿಗೆ ಬಂದರು. ಇದು ಕಾಂಗ್ರೆಸ್‌ನ ಮಟ್ಟವನ್ನು ತೋರಿಸುತ್ತದೆ ಎಂದು ಜೋಶಿ ಹೇಳಿದರು.
ಸದನಕ್ಕೆ ಫಲಕಗಳನ್ನು ತರುವ ಮೂಲಕ ಅಶಿಸ್ತು ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿತ್ತು. ಆದರೂ, ಅಶಿಸ್ತು ಪ್ರದರ್ಶಿಸುತ್ತೇವೆ ಎಂದು ಅವರು ನಮಗೆ ಹೇಳಿದರು ಮತ್ತು ನೀವು ನಮ್ಮನ್ನು ಅಮಾನತು ಮಾಡಬೇಕು ಎಂದು ಹೇಳಿದರೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Parliament Security Breach: ಸಂಸದ ಪ್ರತಾಪ್ ಸಿಂಹ ಹೇಳಿಕೆ ದಾಖಲಿಸಿದ ದಿಲ್ಲಿ ಪೊಲೀಸ್
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ ಮತ್ತು ಫಲಕಗಳನ್ನು ಪ್ರದರ್ಶಿಸಿದ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸಂಸದರು ಸೇರಿ ಒಟ್ಟು 146 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಗುರುವಾರ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನವು 17 ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿದ್ದು, ಬಜೆಟ್ ಅಧಿವೇಶನವು ವೋಟ್ ಆನ್ ಅಕೌಂಟ್ ಅನ್ನು ಅನುಮೋದಿಸುತ್ತದೆ ಮತ್ತು ಯಾವುದೇ ಶಾಸಕಾಂಗ ವ್ಯವಹಾರವನ್ನು ನಡೆಸುವ ಸಾಧ್ಯತೆಯಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದರು.
ಈ ಸುದ್ದಿ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ.