Site icon Vistara News

Tiranga March: ಪ್ರತಿಪಕ್ಷಗಳಿಂದ ತಿರಂಗಾ ಮೆರವಣಿಗೆ, ಸ್ಪೀಕರ್ ಟೀ ಪಾರ್ಟಿಗೆ ಬಹಿಷ್ಕಾರ

Opposition parties holds tiranga march and boycotts tea hosted by speaker

ನವದೆಹಲಿ: ಬಿಜೆಪಿಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ (Congress) ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಪಾರ್ಲಿಮೆಂಟ್ ಹೌಸ್‌ನಿಂದ ವಿಜಯ್ ಚೌಕವರೆಗೆ ಗುರುವಾರ ತಿರಂಗಾ ಮಾರ್ಚ್(Tiranga March) ನಡೆಸಿದವು. ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಾರ್ಟಿ, ಆರ್‌ಜೆಡಿ, ಶಿವಸೇನಾ(ಯುಬಿಟಿ), ಆಪ್, ಎನ್‌ಸಿಪಿ ಹಾಗೂ ಎಡ ಪಕ್ಷಗಳ ಸಂಸದರು ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು ನಡೆದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ತಿರಂಗಾ ಮಾರ್ಚ್ ನಡೆಯಿತು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾಗವಹಿಸಿದ್ದರು.

ಪ್ರತಿಪಕ್ಷಗಳ ತಿರಂಗಾ ಯಾತ್ರೆಯ ವಿಡಿಯೋ

ಇದೇ ವೇಳೆ, ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ ಟೀ ಪಾರ್ಟಿ ಆಯೋಜಿಸಿದ್ದರು. ಆದರೆ, ಪ್ರತಿಪಕ್ಷಗಳ ಸದಸ್ಯರು ಈ ಟೀ ಪಾರ್ಟಿಯನ್ನು ಬಹಿಷ್ಕರಿಸಿದರು. ಇದರೊಂದಿಗೆ ಬಜೆಟ್ ಅಧಿವೇಶನವು ಮುಕ್ತಾಯವಾಗಿದೆ.

ಬಜೆಟ್ ಅಧಿವೇಶನವು ಮಾರ್ಚ್ 13ರಿಂದ ಆರಂಭವಾಗಿದ್ದು, ಅಂದಿನಿಂದಲೂ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿಕೊಂಡು ಬಂದಿವೆ. ಅಲ್ಲದೇ, ಅನೇಕ ಪ್ರತಿಭಟನೆಗಳನ್ನು ಜಂಟಿಯಾಗಿ ನಡೆಸಿದ್ದವು. ವಿಶೇಷವಾಗಿ ಅದಾನಿ ಷೇರು ವ್ಯವಹಾರ ಕುರಿತು ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಇದಕ್ಕಾಗಿ ಜಂಟ ಸಂಸದೀಯ ಸಮಿತಿಯನ್ನು ಪ್ರತಿಪಕ್ಷಗಳು ಒಗ್ಗೂಡಿ ಒತ್ತಡ ಹೇರುವ ಪ್ರಯತ್ನ ಮಾಡಿದವು. ಮತ್ತೊಂದೆಡೆ, ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತವನ್ನು ಅವಮಾನಿಸಿದ್ದಾರೆಂದು ಆರೋಪಿ ಆಡಳಿತಾರೂಢ ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ನಡೆಯಲೇ ಇಲ್ಲ.

ರಾಹುಲ್ ಗಾಂಧಿ ಅಮಾನತು

ಮತ್ತೊಂದೆಡೆ, 2019ರ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿತು. ಇದರ ಪರಿಣಾವು, ರಾಹುಲ್ ಗಾಂಧಿ ಅವರು ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡ ಘಟನೆ ಕೂಡ ಇದೇ ಬಜೆಟ್ ಅಧಿವೇಶನ ವೇಳೆ ನಡೆಯಿತು. ಈ ಮಧ್ಯೆ, ಸೂರತ್ ಸೆಷನ್ಸ್ ಕೋರ್ಟ್, ಕೆಳ ಹಂತದ ನ್ಯಾಯಾಲಯದ ಶಿಕ್ಷೆಗೆ ತಡೆ ನೀಡಿದೆ ಮತ್ತು ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: 2019ರ ಮಾನಹಾನಿ ಕೇಸ್: ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಸೂರತ್ ಸೆಷನ್ ಕೋರ್ಟ್ ತಡೆ, ಸಂಸತ್ ಸದಸ್ಯತ್ವ ಮರಳುತ್ತಾ?

ಬಜೆಟ್ ಅಧಿವೇಶನವು ಸಂಪೂರ್ಣವಾಗಿ ಗಲಾಟೆಯಲ್ಲಿ ಅಂತ್ಯವಾಗಿದೆ. ಯಾವುದೇ ಪ್ರಮುಖ ವಿಷಯಗಳು ಚರ್ಚೆಯಾಗಿಲ್ಲ. ಹಲವು ವಿಧೇಯಕಗಳು ಯಾವುದೇ ಚರ್ಚೆ ಇಲ್ಲದೇ ಅನುಮೋದನೆಗೊಂಡವು. ಅದಾನಿ ಷೇರು ವ್ಯವಹಾರ ಹಾಗೂ ರಾಹುಲ್ ಗಾಂಧಿಯ ವಿಷಯದಲ್ಲಿ ಇಡೀ ಕಲಾಪ ಬಲಿಯಾಯಿತು.

Exit mobile version