Site icon Vistara News

ಪಟನಾದಲ್ಲಿ ಜೂನ್ 12ರಂದು ನಡೆಯಬೇಕಿದ್ದ ವಿರೋಧ ಪಕ್ಷಗಳ ಸಭೆ ಮುಂದೂಡಿಕೆ

Ntish Kumar

#image_title

ನವ ದೆಹಲಿ: ಜೂನ್ 12ರಂದು ಬಿಹಾರದ ಪಟನಾಲದಲ್ಲಿ ಆಯೋಜನೆಗೊಂಡಿದ್ದ ವಿರೋಧ ಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಕೆಲವು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಭೆಗೆ ಬರಲು ಅಸಾಧ್ಯವಾಗಲಿರುವ ಕಾರಣ ಮುಂದೂಡಿಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಲಾಗಿದೆ. ಕೆಲವು ದಿನಗಳ ಬಳಿಕ ಸಭೆ ಆಯೋಜನೆಗೊಳ್ಳಲಿದ್ದು ಎಲ್ಲ ಮುಖಂಡರ ಲಭ್ಯತೆಯ ಬಳಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಜೂನ್ 12 ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಅಂದು ಅವರಿಬ್ಬರಿಗೆ ಬೇರೆ ಕಾರ್ಯಕ್ರಮಗಳು ನಿಗದಿಯಾಗಿರುವ ಕಾರಣ ಸಭೆಯನ್ನು ಮುಂದೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರು ಈಗ ಅಮೆರಿಕದಲ್ಲಿದ್ದಾರೆ. ಅವರು ಸಂಪರ್ಕದಲ್ಲಿ ಇಲ್ಲದ ಕಾರಣ ಯೋಜನೆಗಳಿಗೆ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ನಡುವೆ ಒಗ್ಗಟ್ಟನ್ನು ರೂಪಿಸಲು ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಎಡಪಕ್ಷಗಳ ಹೊರತಾಗಿ ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಪಕ್ಷದ ಮುಖಂಡರ ಸಭೆಯನ್ನು ನಡೆಸಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ : Congress Guarantee: ಮಹಿಳೆಯರೂ ಬಸ್‌ ಟಿಕೆಟ್‌ ಪಡೆಯಲೇಬೇಕು: ಟಿಕೆಟ್‌ನಲ್ಲೂ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್‌!

ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಎನ್​ ಸಿಪಿಯ ಶರದ್ ಪವಾರ್ ಸೇರಿದಂತೆ ಅನೇಕ ಪಕ್ಷಗಳ ನಾಯಕರೊಂದಿಗೆ ಅವರು ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ.

Exit mobile version