Site icon Vistara News

Opposition Unity: ಜಂಟಿ ಸಭೆ ಎಲ್ಲಿ ನಡೆಸಬೇಕು? ಆರಂಭದಲ್ಲೇ ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯ!

Opposition Unity, Differences among opposition parties for joint meeting venue

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ಒಕ್ಕೂಟವನ್ನು (Opposition Unity) ರಚಿಸುವ ಪ್ರಯತ್ನಗಳು ನಡೆದಿವೆ. ಆದರೆ, ಆರಂಭದಲ್ಲೇ ವಿಘ್ನ ಎದುರಾಗಿದ್ದು, ಯಾವ ನಗರದಲ್ಲಿ ಜಂಟಿ ಸಭೆ ನಡೆಸಬೇಕೆಂಬ ಕುರಿತು ಪ್ರತಿಪಕ್ಷಗಳ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಿದ್ದೂ, ಮುಂದಿನ ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈಗಾಗಲೇ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಅವರು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಎರಡು ಬಾರಿ ಭೇಟಿಯಾಗಿ ಚರ್ಚಿಸಿದ್ದರು. ಈ ಮಧ್ಯೆ, ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ ಎಂದು ಟಿಎಂಸಿ ನಾಯಕಿಯೂ ಆಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಘೋಷಣೆ ಮಾಡಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಸಕಾರಾತ್ಮಕ ಭಾವನೆ ಮೂಡಿತ್ತು.

ಆದರೆ, ಪ್ರತಿಪಕ್ಷಗಳ ಜಂಟೆ ಸಭೆ ನಡೆಸುವ ಬಗ್ಗೆ ಭಿನ್ನಾಭಿಪ್ರಾಯವು ವಿರೋಧ ಪಕ್ಷಗಳ ನಡುವೆ ತಲೆದೋರಿದೆ. ಈ ಮೊದಲು ಹೇಳಿದಂತೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಭೆ ನಡೆಯಬೇಕಿತ್ತು. ಆದರೆ, ಕೆಲವು ಪ್ರತಿಪಕ್ಷಗಳು ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ, ಜಂಟಿ ಸಭೆ ನಡೆಯುವುದು ವಿಳಂಬವಾಗುತ್ತಿದೆ.

ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ ಎಂದು ಹೇಳಿದ್ದರೂ, ಪ್ರತಿಪಕ್ಷಗಳ ನಾಯಕತ್ವವನ್ನು ಕಾಂಗ್ರೆಸ್‌ಗೆ ನೀಡಲು ಹಿಂದೇಟು ಹಾಕುತ್ತಿರುವ ಮಮತಾ ಬ್ಯಾನರ್ಜಿ ಅವರು, ನಿತೀಶ್ ಕುಮಾರ್ ಅವರೇ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಒತ್ತಡ ತರುತ್ತಿದ್ದಾರೆಂದು ತಿಳಿದು ಬಂದಿದೆ. ಆದರೆ, ಈ ವಿಚಾರಕ್ಕೆ ಕೆಲವು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ನಿತೀಶ್ ಅವರು ಈ ಸಭೆಯನ್ನು ಆಯೋಜಿಸುವ ಮೂಲಕ ಪ್ರತಿಪಕ್ಷಗಳ ಕೂಟದ ಸಂಚಾಲಕ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ.

ಇದನ್ನೂ ಓದಿ: Opposition Unity: ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಸಜ್ಜು; ಎರಡೇ ದಿನದಲ್ಲಿ ಮಹತ್ವದ ಘೋಷಣೆ?

ಈ ಮಧ್ಯೆ, ಯಾವ ಸ್ಥಳದಲ್ಲಿ ಸಭೆ ನಡೆಸಬೇಕೆಂಬ ಕುರಿತು ಕಾಂಗ್ರೆಸ್ ಯಾವುದೇ ಹೇಳಿಕೆ ನೀಡಿಲ್ಲ. ಹಾಗಿದ್ದೂ, ಕಾಂಗ್ರೆಸ್ ಪರವಾಗಿರುವ ಕೆಲವು ಪಕ್ಷಗಳು ದಿಲ್ಲಿಯಲ್ಲಿ ಸಭೆ ನಡೆಯಲಿ ಎನ್ನುತ್ತಿವೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇನ್ನೂ ಹೊರ ಬಿದ್ದಿಲ್ಲ. ಆದರೆ, ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವಂತೂ ಸಾಗಿದೆ.

ದೇಶದ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version