Site icon Vistara News

EPS V/S OPS: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿಗೆ ಪನ್ನೀರಸೆಲ್ವಂ ಖಡಕ್‌ ಸಂದೇಶ

AIADMK Tussle

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷವೀಗ ಒಡೆದಿದೆ. ಇಷ್ಟುದಿನ ಸಂಯೋಜಕ-ಸಹ ಸಂಯೋಜಕರಾಗಿದ್ದ ಇ.ಪಳನಿಸ್ವಾಮಿ (EPS) ಮತ್ತು ಒ. ಪನ್ನೀರಸೆಲ್ವಂ (OPS) ಈಗ ಬೇರೆಯಾಗಿದ್ದಾರೆ. ಪಕ್ಷದ ದ್ವಿನಾಯಕತ್ವ ರದ್ದು ಮಾಡಿದ ಬಳಿಕ ಈಗ ಪಳನಿಸ್ವಾಮಿ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಬಾಸ್‌ ಎನ್ನಿಸಿಕೊಂಡಿದ್ದಾರೆ. ಮತ್ತೊಂದೆಡೆ ಪನ್ನೀರಸೆಲ್ವಂರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿದೆ. ಹೀಗೆ ಪನ್ನೀರಸೆಲ್ವಂ ಪಕ್ಷದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ಪಳನಿಸ್ವಾಮಿ ಮಾತನಾಡಿ, ಪನ್ನೀರಸೆಲ್ವಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ʼಒ ಪನ್ನೀರಸೆಲ್ವಂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಈಗಿರುವ ಡಿಎಂಕೆ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡು ಇವತ್ತು ಗಲಾಟೆಯನ್ನು ಸೃಷ್ಟಿಸಿದ್ದಾರೆ. ಡಿಎಂಕೆ ನಾಯಕರೊಂದಿಗೆ ಸೇರಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ಪಕ್ಷದ ಕಚೇರಿಗೆ ಸೇರಿದ ಹಲವು ಪ್ರಮುಖ ವಸ್ತುಗಳನ್ನು ಅವರ ಬೆಂಬಲಿಗರು ತೆಗೆದುಕೊಂಡು ಹೋಗಿದ್ದಾರೆʼ ಎಂದು ಪಳನಿಸ್ವಾಮಿ ಹೇಳಿದ್ದಾರೆ. ಅಷ್ಟೇ ಅಲ್ಲ, ʼಇಂದು ಎಐಎಡಿಎಂಕೆ ಸಾಮಾನ್ಯ ಸಭೆ ನಿರ್ಣಾಯಕವಾಗಿದ್ದು, ಪ್ರಧಾನ ಕಚೇರಿಗೆ ಬಿಗಿ ಭದ್ರತೆ ಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದೆವು. ಹಾಗಿದ್ದಾಗ್ಯೂ ಭದ್ರತೆ ಕೊಡಲಿಲ್ಲ. ಕಾನೂನು-ಸುವ್ಯವಸ್ಥೆ ಹಾಳು ಮಾಡಬೇಕೆಂದೇ ಬುದ್ಧ್ಯಾಪೂರ್ವಕವಾಗಿ ಅವರು ಹೀಗೆ ಮಾಡಿದ್ದಾರೆʼ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ಎಐಎಡಿಎಂಕೆ ಬಿರುಕು, ಅಣ್ಣಾ ದ್ರಾವಿಡ ಕಳಗಂನಲ್ಲಿ ಅಣ್ಣಂದಿರ ಕಾಳಗವೇಕೆ?

ʼಯಾರು ಬೇಕಾದರೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಬಹುದಿತ್ತು. ಪಕ್ಷಕ್ಕೆ ಒಂದೇ ನಾಯಕತ್ವ ಇರಬೇಕು ಎಂಬುದು ನಮ್ಮ ಕಾರ್ಯಕರ್ತರ ಬೇಡಿಕೆ. ಆದರೆ ಅದನ್ನೇ ಪನ್ನೀರಸೆಲ್ವಂ ಕೇಳಲಿಲ್ಲ. ಅವರನ್ನು ಮನವೊಲಿಸಲು ಎಐಎಡಿಎಂಕೆಯ ಹಲವು ನಾಯಕರು ಪ್ರಯತ್ನಪಟ್ಟರು. ಹಲವು ಬಾರಿ ಅವರಿಗೆ ತಿಳಿಸಿ ಹೇಳಿದರು. ಆದರೆ ಅವರು ತಮ್ಮ ಸ್ವಾರ್ಥವನ್ನಷ್ಟೇ ಯೋಚಿಸಿದರು. ಹೀಗಾಗಿ ಪನ್ನೀರಸೆಲ್ವಂ ಮತ್ತು ಅವರನ್ನು ಬೆಂಬಲಿಸಿದ್ದ ಆರ್‌.ವೈಥಿಲಿಂಗಮ್‌, ಪಿ.ಎಚ್‌.ಮನೋಜ್‌ ಪಾಂಡಿಯನ್‌ ಮತ್ತು ಮಾಜಿ ಶಾಸಕ ಜೆಸಿಡಿ ಪ್ರಭಾಕರ್‌ ಅವರನ್ನು ಉಚ್ಚಾಟನೆ ಮಾಡಲಾಗಿದೆʼ ಎಂದು ಪಳಿನಿಸ್ವಾಮಿ ಹೇಳಿದ್ದಾರೆ.

ಪನ್ನೀರಸೆಲ್ವಂ ಖಡಕ್‌ ಸಂದೇಶ
ಈ ಮಧ್ಯೆ ಪನ್ನೀರಸೆಲ್ವಂ ತಮ್ಮ ಉಚ್ಚಾಟನೆಯನ್ನು ಒಪ್ಪಿಕೊಂಡಿಲ್ಲ. ನನ್ನನ್ನು ಎಐಎಡಿಎಂಕೆಯಿಂದ ಉಚ್ಚಾಟನೆಗೊಳಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಈ ಮಾತುಗಳನ್ನು ಜಯಲಲಿತಾ ಅವರ ಸ್ಮಾರಕದ ಬಳಿ ನಿಂತು ಹೇಳಿದ್ದಾರೆ. ಇನ್ನು ಪನ್ನೀರಸೆಲ್ವಂ ವಿರುದ್ಧ ಉಚ್ಚಾಟನೆ ಕ್ರಮಕ್ಕೆ ಎಐಎಡಿಎಂಕೆ ಮುಂದಾಗುತ್ತಿದ್ದಂತೆ ಅವರ ಬೆಂಬಲಿಗರು ಸಿಕ್ಕಾಪಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಪ್ರಧಾನ ಕಚೇರಿ ಬಾಗಿಲು ಒಡೆದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಎಐಎಡಿಎಂಕೆಯ ಕಂದಾಯ ವಿಭಾಗದ ಕಚೇರಿ ಬಾಗಿಲನ್ನು ಸೀಲ್‌ ಮಾಡಲಾಗಿದೆ. ಪನ್ನೀರಸೆಲ್ವಂ ಪಕ್ಷದ ಖಜಾಂಚಿಯಾಗಿದ್ದರು. ಅವರನ್ನು ಆ ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ, ಬೆಂಬಲಿಗರು ಕಂದಾಯ ವಿಭಾಗದಲ್ಲಿ ದಾಂಧಲೆ ಎಬ್ಬಿಸುವ ಆತಂಕ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಎಐಎಡಿಎಂಕೆ ದ್ವಿನಾಯಕತ್ವ ವಿವಾದ; ಪಳನಿಸ್ವಾಮಿ ಪ್ರಧಾನ ಕಾರ್ಯದರ್ಶಿ, ಬೆಂಬಲಿಗರಿಂದ ಬೀದಿ ಗಲಾಟೆ

Exit mobile version