Site icon Vistara News

ಏಕನಾಥ್‌ ಶಿಂಧೆ ಮುಂದಿರುವ ಆಯ್ಕೆ ಕಾನೂನು ಸಮರ ಅಥವಾ ಗವರ್ನರ್‌ ಭೇಟಿ?

ಏಕನಾಥ್‌ ಶಿಂಧೆ

ಮುಂಬಯಿ: ಶಿವಸೇನಾದ ೪೦ ಶಾಸಕರು ಗುವಾಹಟಿಯಲ್ಲಿ ತಮ್ಮೊಂದಿಗೆ ಇದ್ದಾರೆ. ನಾವೇ ಬಾಳಾ ಸಾಹೇಬ್‌ ಠಾಕ್ರೆಯವರ ನಿಜವಾದ ಅನುಯಾಯಿಗಳು ಎಂದು ಹೇಳುತ್ತಿರುವ ಏಕನಾಥ್‌ ಶಿಂಧೆ ಇಡೀ ಶಿವಸೇನಾ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಲಿದ್ದಾರೆಯೇ, ಅವರ ಮುಂದಿರುವ ಕಾನೂನಾತ್ಮಕ ಸವಾಲುಗಳೇನು? ಠಾಕ್ರೆ ಪಾಳೆಯ ಯಾವ ಪ್ರತಿತಂತ್ರದ ಮೂಲಕ ಸಡ್ಡು ಹೊಡೆಯಬಹುದು ಎಂಬ ಕುತೂಹಲ ಈಗ ಉಂಟಾಗಿದೆ.

ಏಕೆಂದರೆ ಪಕ್ಷಾಂತರ ವಿರೋಧಿ ಕಾನೂನು ೨೦೦೩ರಿಂದೀಚೆಗೆ ಮತ್ತಷ್ಟು ಬಿಗಿಯಾಗಿರುವುದರಿಂದ, ಶಿವಸೇನಾದ ಮೂರನೇ ಎರಡರಷ್ಟು ಶಾಸಕರ ಬೆಂಬಲ ಗಳಿಸಿದ್ದಷ್ಟಕ್ಕೇ ಎಲ್ಲವೂ ಮುಗಿಯುವುದಿಲ್ಲ. ಏಕನಾಥ್‌ ಶಿಂಧೆ ಅವರಿಗೆ ಒಂದೋ ಬೇರೆ ಪಕ್ಷದ ಜತೆಗೆ ವಿಲೀನ ಇಲ್ಲವೇ ನಮ್ಮ ಬಣವೇ ನಿಜವಾದ ಶಿವಸೇನೆ ಎಂದು ಸಾಬೀತುಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಅವರ ಬಂಡಾಯವನ್ನು ಪಕ್ಷಾಂತರ ವಿರೋಧಿ ಕಾಯಿದೆ ಮಾನ್ಯ ಮಾಡುವುದಿಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ಪಕ್ಷಾಂತರ ವಿರೋಧಿ ಕಾಯಿದೆ ಬಿಗಿ

ಕಳೆದ ೨೦೦೩ರಲ್ಲಿ ಪಕ್ಷಾಂತರ ವಿರೋಧಿ ಕಾಯಿದೆಗೆ ತಿದ್ದುಪಡಿ ತರಲಾಗಿತ್ತು. ಅದು ಪಕ್ಷ ವಿಭಜನೆಯನ್ನು ಪರಿಗಣಿಸುವುದಿಲ್ಲ. ಆದ್ದರಿಂಧ ಶಿಂಧೆ ಅವರ ಮುಂದಿರುವ ಆಯ್ಕೆಗಳು ಸೀಮಿತ ಎಂಬುದು ಕೆಲ ಕಾನೂನು ತಜ್ಞರ ಅಭಿಪ್ರಾಯ.

೨೦೦೩ರ ತನಕವೂ ಮೂರನೇ ಎರಡರಷ್ಟು ಶಾಸಕರು ಪಕ್ಷದಿಂದ ಹೊರನಡೆದು ಪ್ರತ್ಯೇಕ ಗುಂಪು ಕಟ್ಟಿಕೊಂಡರೆ, ಆಗ ಅದಕ್ಕೆ ಪಕ್ಷಾಂತರ ವಿರೋಧಿ ಕಾಯಿದೆಯ ಪ್ರತಿಕೂಲ ಪರಿಣಾಮಗಳ ಅಪಾಯ ತಟ್ಟುತ್ತಿರಲಿಲ್ಲ. ಆದರೆ ೨೦೦೩ರಲ್ಲಿ ಈ ಕಾನೂನು ಮತ್ತಷ್ಟು ಬಿಗಿಯಾಯಿತು.

” ನೀವು ಮೂರನೇ ಎರಡರಷ್ಟು ಶಾಸಕರ ಪಡೆಯೊಂದಿಗೆ ಪಕ್ಷದಿಂದ ಹೊರ ನಡೆದು ನಿಮ್ಮದೇ ಗುಂಪು ಕಟ್ಟಿದರೂ, ಅನರ್ಹತೆಯ ಅಪಾಯದಿಂದ ಪಾರಾಗಲು ಸುಲಭವಿಲ್ಲʼʼ ಎನ್ನುತ್ತಾರೆ ಕಾನೂನು ತಜ್ಞ ರವೀಂದ್ರ ಕದಮ್.‌ ಹೀಗಾಗಿ ಶಿಂಧೆ ಅವರು ತಮ್ಮದೇ ನಿಜವಾದ ಶಿವ ಸೇನಾ ಪಕ್ಷ ಎಂದು ಪ್ರತಿಪಾದಿಸಬೇಕು. ಅಥವಾ ಮತ್ತೊಂದು ಪಕ್ಷದ ಜತೆ ತಮ್ಮ ಬಣವನ್ನು ವಿಲೀನಗೊಳಿಸಬೇಕು. ಬದಲಾಗಿರುವ ಕಾನೂನು ಪಕ್ಷ ವಿಭಜನೆಯನ್ನು ಪುರಸ್ಕರಿಸುವುದಿಲ್ಲ ಎನ್ನುತ್ತಾರೆ ಕದಮ್.

ಎನ್‌ಸಿಪಿಯ ಏಕನಾಥ್‌ ಖಡ್ಸೆ ಅವರ ಪ್ರಕಾರ, ಶಿವಸೇನಾ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಿಂಧೆಯವರ ಯತ್ನಕ್ಕೆ ಅಡ್ಡಿ ಉಂಟಾಗಿದೆ. ಡೆಪ್ಯುಟಿ ಸ್ಪೀಕರ್‌ ನರಹರಿ ಝಿರ್ವಾಲ್‌ ಅವರು ಶಿಂಧೆಯವರ ಬದಲಿಗೆ ಅಜಯ್‌ ಚೌಧುರಿ ಅವರನ್ನು ಶಿವಸೇನಾದ ಶಾಸಕಾಂಗ ಪಕ್ಷದ ನಾಯಕರಾಗಿ ಮಾನ್ಯತೆ ಮಾಡಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಖಡ್ಸೆ. ಅಸೆಂಬ್ಲಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ವಿಪ್‌ ಅಡಿಯಲ್ಲಿ ಮತ ಅಥವಾ ಪಕ್ಷದ ಎಲ್ಲ ಆದೇಶಗಳು ಅನ್ವಯಿಸುತ್ತವೆ.

ಇಂಥ ಸನ್ನಿವೇಶದಲ್ಲಿ ಶಿಂಧೆ ಬಣ ಕೋರ್ಟ್‌ ಮೊರೆ ಹೋಗಬಹುದು. ಶಾಸಕಾಂಗ ಪಕ್ಷದ ನಾಯಕನ ನೇಮಕ ಮತ್ತು ವಿಪ್‌ ಜಾರಿಗೊಳಿಸುವ ಅಧಿಕಾರ ತಮಗಿದೆ ಎಂದು ನ್ಯಾಯಾಲಯದ ಮೂಲಕ ಹಕ್ಕು ಸ್ಥಾಪಿಸಲು ಯತ್ನಿಸಬಹುದು ಎನ್ನುತ್ತಾರೆ ಖಡ್ಸೆ.

ಶಿಂಧೆ ಬಣದಿಂದ ಗವರ್ನರ್‌ ಭೇಟಿ ಸಂಭವ?

ಮಹಾರಾಷ್ಟ್ರ ಸರ್ಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್‌ ಕಾಲ್ಸೆ ಪ್ರಕಾರ, ಏಕನಾಥ್‌ ಶಿಂಧೆಯವರು ರಾಜ್‌ ಭವನ್‌ನಲ್ಲಿ ರಾಜ್ಯಪಾಲರನ್ನು ಭೇಟಿಯಾಗುವುದು ಸೂಕ್ತ ಆಯ್ಕೆ. ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ರಾಜ್ಯಪಾಲರಿಗೆ ತಿಳಿಸಿ, ಅವಿಶ್ವಾಸ ಗೊತ್ತುವಳಿ ಮಂಡನೆಗೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ಮನವಿ ಸಲ್ಲಿಸುವುದು ಸೂಕ್ತ.

ಇದನ್ನೂ ಓದಿ: ಶಿವಸೇನಾದಿಂದ 16 ರೆಬೆಲ್‌ ಶಾಸಕರಿಗೆ ನೋಟಿಸ್‌, ಅವಿಶ್ವಾಸ ಗೊತ್ತುವಳಿಗೆ ಶಿಂಧೆ ಬಣ ಸಜ್ಜು

Exit mobile version