Site icon Vistara News

Oscar 2023: ಆಸ್ಕರ್‌ ಪ್ರಶಸ್ತಿ ಘೋಷಣೆ ಯಾವಾಗ? ನೋಡುವುದು ಹೇಗೆ? ಆ‌ರ್‌ಆರ್‌ಆರ್‌ಗೆ ಅವಾರ್ಡ್ ಸಿಗುತ್ತಾ?

Oscar 2023: When will the Oscars be announced? How to see Will RRR get an award?

ಬೆಂಗಳೂರು: ಆಸ್ಕರ್‌ ಪ್ರಶಸ್ತಿ (Oscar 2023) ಸಿನಿಮಾ ರಂಗದವರಿಗೆ ಅತಿ ದೊಡ್ಡ ಗೌರವ. ಆ ಪ್ರಶಸ್ತಿ ಪಡೆಯಬೇಕೆನ್ನುವುದು ಸಿನಿಮಾ ಕ್ಷೇತ್ರದ ಎಲ್ಲರ ಕನಸಾಗಿರುತ್ತದೆ. ಅದರಲ್ಲೂ ಈ ಬಾರಿಯ ಆಸ್ಕರ್‌ ಪ್ರಶಸ್ತಿಯಂತೂ ಇನ್ನೂ ವಿಶೇಷ. ಭಾರತ ಕೂಡ ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ನಮ್ಮ ಮುಡಿಗೆ ಪ್ರಶಸ್ತಿಯ ಗರಿ ಸಿಗುತ್ತದೆಯೇ ಎಂದು ನೋಡಲು ಭಾರತೀಯರು ಕಾದು ಕುಳಿತಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್(RRR) ಸಿನಿಮಾದ ‘ನಾಟು ನಾಟು …’ ಒರಿಜಿನಲ್‌ ಬೆಸ್ಟ್‌ ಹಾಡು ಕೆಟಗರಿ, ಅತ್ಯುತ್ತಮ ಸಾಕ್ಷ್ಯಚಿತ್ರ ಕೆಟಗರಿಯಲ್ಲಿ ಆಲ್‌ ದಿ ಬ್ರೆತ್ಸ್‌ , ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್‌ ವಿಸ್ಪರರ್ಸ್ ನಾಮಿನೇಟ್‌ ಆಗಿವೆ. ಹಾಗಾಗಿ, ಈ ಬಾರಿಯ ಆಸ್ಕರ್ ಭಾರತೀಯರಿಗೆ ವಿಶೇಷವಾಗಿದೆ. ಹಾಗಿದ್ದರೆ ಈ ಪ್ರಶಸ್ತಿ ಕಾರ್ಯಕ್ರಮ ಯಾವಾಗ ನಡೆಯಲಿದೆ? ಅದನ್ನು ನೋಡುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ದಿ ಅಕಾಡೆಮಿ ಮಾಡಿರುವ ಟ್ವೀಟ್ ಹೀಗಿದೆ…

ಆಸ್ಕರ್ ಯಾವಾಗ ಘೋಷಣೆ?

ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ ಭಾನುವಾರ ಅಂದರೆ ಮಾರ್ಚ್‌ 12ರಂದು ನಡೆಯಲಿದೆ. ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಭಾರತದ ಸಮಯದ ಪ್ರಕಾರ ಮಾರ್ಚ್ 13ರಂದು ಬೆಳಗ್ಗೆ 5.30ರಿಂದ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ವೀಕ್ಷಿಸುವುದು ಹೇಗೆ?

ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ(disney+ hotstar) ಲೈವ್ ಸ್ಟ್ರೀಮ್ ನೋಡಬಹುದು. ‌ಅಲ್ಲದೇ, ಎಬಿಸಿ ಟಿವಿಯಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

ಎಲ್ಲಿ ಕಾರ್ಯಕ್ರಮ ನಡೆಯಲಿದೆ?

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಜಿಮ್ಮಿ ಕಿಮ್ಮೆಲ್‌ ಅವರು ನಡೆಸಿಕೊಡಲಿದ್ದಾರೆ. ಅವರು ಈ ಹಿಂದೆ 2017 ಮತ್ತು 2019ರಲ್ಲಿ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

ಭಾರತದ ನಟಿ ದೀಪಿಕಾ ಪಡುಕೋಣೆ ಪ್ರೆಸೆಂಟರ್

ಇನ್ನು ಪ್ರಶಸ್ತಿ ಪ್ರೆಸೆಂಟರ್‌ ಪಟ್ಟಿಯಲ್ಲಿ ಭಾರತದ ದೀಪಿಕಾ ಪಡುಕೋಣೆ ಹಾಗೂ, ನಟ-ನಟಿಯರಾದ ಎಮಿಲಿ ಬ್ಲಂಟ್, ರಿಜ್ ಅಹ್ಮದ್, ಡ್ವೇನ್ ಜಾನ್ಸನ್, ಗ್ಲೆನ್ ಕ್ಲೋಸ್, ಅರಿಯಾನಾ ಡಿಬೋಸ್, ಸ್ಯಾಮ್ಯುಯೆಲ್ ಎಲ್.ಜಾಕ್ಸನ್, ಜೆನ್ನಿಫರ್ ಕೊನ್ನೆಲ್ಲಿ, ಮೈಕೆಲ್ ಜೋನಾಥನ್, ಮೈಕೆಲ್ ಬಿ.ಮೇಜರ್ಸ್, ಟ್ರಾಯ್ ಕೋಟ್ಸುರ್, ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೊನೆ, ಕ್ವೆಸ್ಟ್ಲೋವ್, ಜೊಯ್ ಸಾಲ್ಡಾ ಮತ್ತು ಡೊನ್ನಿ ಯೆನ್ ಇದ್ದಾರೆ. ಹಾಗೆಯೇ ದನೈ ಗುರಿರಾ, ಜೆಸ್ಸಿಕಾ ಚಸ್ಟೈನ್, ಸಲ್ಮಾ ಹಯೆಕ್ ಪಿನಾಲ್ಟ್, ಎಲಿಜಬೆತ್ ಬ್ಯಾಂಕ್ಸ್, ಆಂಟೋನಿಯೊ ಬಾಂಡೆರಾಸ್, ಜಾನ್ ಚೋ, ನಿಕೋಲ್ ಕಿಡ್‌ಮನ್, ಆಂಡ್ರ್ಯೂ ಗಾರ್ಫೀಲ್ಡ್, ಹಗ್ ಗ್ರಾಂಟ್, ಫ್ಲಾರೆನ್ಸ್ ಪಗ್ ಮತ್ತು ಸಿಗೌರ್ನಿ ವೀವರ್ ಕೂಡ ಪ್ರೆಸೆಂಟರ್ಸ್‌ ಪಟ್ಟಿಯಲ್ಲಿದ್ದಾರೆ.

ಭಾರತದ ಮೊದಲ ಹಾಗೂ ಏಕೈಕ ಗೀತೆ

ಈವರೆಗೆ ಆಸ್ಕರ್‌ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಭಾರತದ ಯಾವೊಂದು ಗೀತೆಯೂ ನಾಮ ನಿರ್ದೇಶನವಾಗಿರಲಿಲ್ಲ. ಇದೇ ಮೊದಲನೇ ಬಾರಿಗೆ ನಮ್ಮ ದೇಶದ ಹಾಡೊಂದು ಆ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇದು ನಮ್ಮ ದಕ್ಷಿಣ ಭಾರತದ ನಾಟು ನಾಟು ಹಾಡು ಎನ್ನುವ ಹೆಮ್ಮೆ ದಕ್ಷಿಣ ಭಾರತೀಯರದ್ದು. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಭೈರವ ಅವರು ಹಾಡಿಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: Oscars 2023: ಆಸ್ಕರ್‌ ಅವಾರ್ಡ್‌ ಘೋಷಣೆಗೆ ಕ್ಷಣಗಣನೆ, ಪ್ರಶಸ್ತಿ ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್

ಈ ಹಾಡು ಅಪ್ಲಾಸ್‌(ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ ಗನ್: ಮೇವರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್), ದಿಸ್ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒಮ್ಸ್) ಹಾಡುಗಳೊಂದಿಗೆ ಸ್ಪರ್ಧಿಸುತ್ತಿದೆ.

Exit mobile version