ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರವು (RRR Movie) ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ (Oscars 2023) ಗೆಲ್ಲುತ್ತಿದ್ದಂತೆ, ಶುಭಾಶಯಗಳ ಸುರಿಮಳೆ ಸುರಿದಿದೆ. ಅದರಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ (Andhra Pradesh chief minister YS Jagan Mohan Reddy) ಅವರು ತೆಲುಗು ಧ್ವಜ ಎತ್ತರದಲ್ಲಿ ಹಾರಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮೂಲತಃ ಪಾಕಿಸ್ತಾನದವರಾದ ಮತ್ತು ಈಗ ಭಾರತೀಯ ಪ್ರಜೆಯಾಗಿರುವ ಗಾಯಕ ಅದ್ನಾನ್ ಸಾಮಿ (Adnan Sami) ಕೊಂಕು ತೆಗೆದಿದ್ದಾರೆ. ಅಲ್ಲದೇ, ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಬಾವಿಯೊಳಗಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂದು ಜರಿದಿದ್ದಾರೆ. ಸಾಮಿಯ ಟ್ವೀಟ್‌ಗೆ ನೆಟ್ಟಿಗರು ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಂಧ್ರ ಸಿಎಂ ಏನೆಂದು ಟ್ವೀಟ್ ಮಾಡಿದ್ದರು?
ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ಆರ್‌ಆರ್‌ಆರ್ ತಂಡಕ್ಕೆ ಆಂಧ್ರ ಸಿಎಂ ವೈ ಎಸ್ ಜಗನ್‌ಮೋಹನ್ ರೆಡ್ಡಿ ಶುಭಾಶಯ ಕೋರಿದ್ದರು. ಟ್ವೀಟ್ ಮಾಡಿ, ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ! ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನು ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನು ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನನಗೆ ಹೆಮ್ಮೆಯಿದೆ. @ssrajamouli, @tarak9999, @AlwaysRamCharan ಮತ್ತು @mmkeeravaani ಅವರು ನಿಜವಾಗಿಯೂ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದ್ದರು.
ಅದ್ನಾನಿ ಸಾಮಿ ಹೇಳಿದ್ದೇನು?
ತೆಲುಗು ಬಾವುಟ ಎತ್ತರದಲ್ಲಿ ಹಾರಾಟ ನಡೆಸುತ್ತಿದೆ ಎಂದು ಟ್ವೀಟ್ ಮಾಡಿದ್ದಕ್ಕೆ ಕೊಂಕು ತೆಗೆದಿರುವ ಮೂಲತಃ ಪಾಕಿಸ್ತಾನದವರಾದ ಹಾಗೂ ಈಗ ಭಾರತೀಯ ಪ್ರಜೆಯಾಗಿರುವ ಅದ್ನಾನ್ ಸಾಮಿ, ಆಂಧ್ರ ಸಿಎಂ ಟ್ವೀಟ್ ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸುತ್ತಿದೆ. ಅವರಿಗೆ ರಾಷ್ಟ್ರೀಯ ಹೆಮ್ಮೆಯನ್ನು ಅಳವಡಿಸಿಕೊಳ್ಳಲು ಅಥವಾ ಬೋಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಬಾವಿಯಲ್ಲಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಸಮುದ್ರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಾದೇಶಿಕ ವಿಭಜನೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸ್ವೀಕರಿಸಲು ಅಥವಾ ಬೋಧಿಸಲು ಸಾಧ್ಯವಾಗದಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ಎಂದು ಅದ್ನಾನ್ ಸಾಮಿ ಟ್ವೀಟ್ ಮಾಡಿದ್ದಾರೆ.
ಸಾಮಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಅದ್ನಾನ್ ಸಾಮಿ ಟ್ವೀಟ್‌ಗೆ ನೆಟ್ಟಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರು(ವೈ ಎಸ್ ಜಗನ್ ಮೋಹನ್ ರೆಡ್ಡಿ) ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿ. ತಮ್ಮ ಭಾಷೆಯ ಬಗ್ಗೆ ಅವರು ಅಭಿಮಾನ ವ್ಯಕ್ತಪಡಿಸುವುದು ನ್ಯಾಯಸಮ್ಮತ. ನೀನು ಅಸುರಕ್ಷತೆಯನ್ನು ಅನುಭವಿಸಬೇಡ. ಕಾಳಜಿ ಮಾಡಬೇಡ, ಐಡೆಟಿಂಟಿಯಲ್ಲಿ ಭಾರತ ಬಹಳ ಗಟ್ಟಿಯಾಗಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಆಸ್ಕರ್ ಪ್ರಶಸ್ತಿಯನ್ನು ಗೆದ್ದ ತೆಲುಗು ಹಾಡು. ಹೌದು, ರಾಷ್ಟ್ರವು ಎಂದಿಗೂ ಮೊದಲಾಗಿರುತ್ತದೆ. ಎಲ್ಲಾ ಸೆಲ್ಯೂಟ್‌ಗಳು ರಾಷ್ಟ್ರದ ಕಡೆಗೆ ಇರುತ್ತವೆ. ಆದರೆ, ತೆಲುಗು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿಕೊಂಡಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ವಕ್ತಾರ ಎಸ್ ರಾಜೀವ್ ಕೃಷ್ಣ ಅವರು ಟ್ವೀಟ ಮಾಡಿ, ನೀವು ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದರಿಂದ ಮೊದಲು ಸೌಜನ್ಯದಿಂದ ಮಾತನಾಡಿ. ಎರಡನೆಯದು – ಹಾಡು ತೆಲುಗಿನಲ್ಲಿದೆ. ಈ ಹಾಡಿನ ಭಾಗವಾಗಿರುವ ಎಲ್ಲರೂ ತೆಲುಗಿನವರು. ಆದ್ದರಿಂದ ತೆಲುಗು ಎಂದು ಹೆಮ್ಮೆಪಡುತ್ತೇವೆ ಮತ್ತು ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಪರಸ್ಪರರು ಪ್ರತ್ಯೇಕವಲ್ಲ. ವಿವಾದ ಸೃಷ್ಟಿಸುವುದನ್ನು ಮೊದಲು ನಿಲ್ಲಿಸಿ ಎಂದು ಅದ್ನಾನ್ ಸಾಮಿಗೆ ಹೇಳಿದ್ದಾರೆ.