ಲಾಸ್ ಏಂಜಲೀಸ್: ರಾಜಮೌಳಿ ನಿರ್ದೇಶನದ ಭಾರತೀಯ ಚಿತ್ರ “ಆರ್‌ಆರ್‌ಆರ್ʼನ ʼನಾಟು ನಾಟುʼ ಹಾಡು ಮತ್ತು ಡ್ಯಾನ್ಸ್ ಪ್ರತಿಷ್ಠಿತ ಆಸ್ಕರ್‌ನ ʼಅತ್ಯುತ್ತಮ ಹಾಡುʼ ವಿಭಾಗದ ಪ್ರಶಸ್ತಿ ಗೆದ್ದಿದೆ. 19 ತಿಂಗಳುಗಳಿಂದ ಈ ಹಾಡು ದೇಶ ವಿದೇಶದ ಎಲ್ಲರ ಗಮನ ಸೆಳೆಯುತ್ತ, ಒಂದಾದ ಮೇಲೊಂದರಂತೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತ ಹೋಗಿದೆ.
ಹಾಡಿನ ಕಂಪೋಸರ್ ಕೀರವಾಣಿ ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಾತ್ರವಲ್ಲ, ನಾಟು ನಾಟು ಹಾಡಿನ ಪರ್‌ಫಾರ್ಮೆನ್ಸ್ ಕೂಡ ಆಸ್ಕರ್ ವೇದಿಕೆಯಲ್ಲಿ ನಡೆದಿದೆ.
ಆರ್‌ಆರ್‌ಆರ್ ಸಿನಿಮಾ ಜನಪ್ರಿಯವಾದ ನಂತರ ಈ ಹಾಡು ಎಲ್ಲ ಕಡೆ ವೈರಲ್ ಆಗಿತ್ತು. ಅಸಂಖ್ಯ ಇನ್‌ಸ್ಟಾಗ್ರಾಂ ರೀಲ್‌ಗಳಿಗೂ ಸೋಶಿಯಲ್ ಮೀಡಿಯಾದ ಟ್ರೆಂಡ್‌ಗಳಿಗೂ ಕಾರಣವಾಗಿತ್ತು. ಬ್ರಿಟನ್‌ನಲ್ಲೂ ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾ ಹವಾ ಎಬ್ಬಿಸಿತ್ತು.
ನಾಟು ನಾಟು ಹಾಡನ್ನು ಬರೆದವರು ಚಂದ್ರಬೋಸ್. ನೃತ್ಯ ಕಂಪೋಸ್ ಮಾಡಿದವರು ಕೀರವಾಣಿ. ಜನವರಿಯಲ್ಲಿ ಈ ಹಾಡು ʼಗೋಲ್ಡನ್ ಗ್ಲೋಬ್ʼ ಪ್ರಶಸ್ತಿ ಗೆದ್ದಿತ್ತು. ಅಲ್ಲಿ ರಿಹಾನಾ, ಟೇಯ್ಲರ್ ಸ್ವಿಫ್ಟ್, ಲೇಡಿ ಗಾಗಾ ಮುಂತಾದ ಘಟಾನುಘಟಿ ರ್ಯಾಪರ್‌ಗಳನ್ನೇ ಮಣಿಸಿತ್ತು. ಅದೇ ತಿಂಗಳಲ್ಲಿ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಕೂಡ ಪಡೆದಿತ್ತು.
ʼʼಇದು ಕೇವಲ ಈ ಹಾಡಿನ ಮ್ಯೂಸಿಕ್ ಅಥವಾ ನೃತ್ಯಕ್ಕೆ ಮಾತ್ರವಲ್ಲ. ಆರ್‌ಆರ್‌ಆರ್‌ನ ಇಡೀ ಕಥೆಯನ್ನೇ 10 ನಿಮಿಷಗಳ ನಾಟು ನಾಟು ಹಾಡು ಅಭಿವ್ಯಕ್ತಿಸುತ್ತದೆ. ಇದು ಸಿನಿಮಾದ ಕಥೆಯೊಳಗಿನ ಕಥೆʼʼ ಎಂದು ನಿರ್ದೇಶಕ ರಾಜಮೌಳಿ ಒಂದು ಸಂದರ್ಶನದಲ್ಲಿ ಹೇಳಿದ್ದರು.
ಆರ್‌ಆರ್‌ಆರ್ ಚಾರಿತ್ರಿಕ ವ್ಯಕ್ತಿಗಳ ಕಥೆಯನ್ನು ಹೊಂದಿದ ಚಿತ್ರ. ಭಾರತದಲ್ಲಿ ವಸಾಹತುಶಾಹಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಇಬ್ಬರು ಕ್ರಾಂತಿಕಾರಿಗಳ ಕಥೆಯನ್ನು ಈ ಚಿತ್ರ ಸಾರುತ್ತದೆ. ʼನಾಟು ನಾಟುʼ ಹಾಡಿನಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ನೃತ್ಯದ ಮೂಲದ ಇವರಿಬ್ಬರು ಮಣಿಸುವುದನ್ನು ಕಾಣಬಹುದಾಗಿದೆ.
2020ರಲ್ಲಿ ಚಿತ್ರ ನಿರ್ಮಿಸುತ್ತಿದ್ದಾಗ ಕೀರವಾಣಿಗೆ ರಾಜಮೌಳಿ ಅವರು, ಚಿತ್ರದ ಹೀರೋಗಳ ಡ್ಯಾನ್ಸಿಂಗ್ ಪ್ರತಿಭೆ ತೋರಿಸುವ ಹಾಡು ಬೇಕೆಂದು ಕೇಳಿದ್ದರಂತೆ. ಆಗ ಚಂದ್ರಬೋಸ್ ಅವರಿಗೆ ಕೀರವಾಣಿ ʼʼಏನು ಬೇಕಾದರೂ ಬರಿ, ಆದರೆ ಇದು 1920ರ ಕಾಲದ ಕಥೆ. ಆಗಿನ ಕಾಲದ ಶಬ್ದಗಳನ್ನು ಹಾಕಿ ಬರಿʼʼ ಎಂದಿದ್ದರಂತೆ. ಆ ಸಂದರ್ಭದಲ್ಲಿ ಯಾವುದೇ ಮೆಲೊಡಿ ಇಲ್ಲವಾದುದರಿಂದ ʼಡ್ಯಾನ್ಸ್, ಡ್ಯಾನ್ಸ್ʼ ಎಂದು ಅರ್ಥ ಬರುವ ʼನಾಟು ನಾಟುʼ ಪದಗಳನ್ನಿಟ್ಟುಕೊಂಡು ಕುಣಿಯುವ ಲಯದ ಮೂಲಕ ಚಂದ್ರಬೋಸ್ ಹಾಡನ್ನು ಆವಿಷ್ಕರಿಸಿದ್ದರು.
ಇದನ್ನು ಅತಿವೇಗದ ಬೀಟ್‌ನಲ್ಲಿ ಸಂಯೋಜಿಸಲಾಯಿತು. ಆಂಧ್ರ ಹಾಗೂ ತೆಲಂಗಾಣಗಳ ಜಾನಪದ ಹಾಡು ಕುಣಿತಗಳಲ್ಲಿ ಇದುಇ ಸಾಮಾನ್ಯವಾಗಿದೆ. ತೆಲಂಗಾಣದ ತಮ್ಮ ಬಾಲ್ಯದಿಂದ ಪಡೆದ ಕೆಲ ಜಾನಪದ ಉಲ್ಲೇಖಗಳನ್ನು ಚಂದ್ರಬೋಸ್ ಇಲ್ಲಿ ಪ್ರಯೋಗಿಸಿದರು. ಎರಡು ದಿನಗಳಲ್ಲಿ ಹಾಡನ್ನು ಬರೆದರು. ಆದರೆ ಡ್ಯಾನ್ಸ್ ಚಿತ್ರೀಕರಣ ತಿಂಗಳುಗಟ್ಟಲೆ ತೆಗೆದುಕೊಂಡಿತು.
ಈ ಹಾಡಿನ ಬಹಳಷ್ಟು ಕ್ರೆಡಿಟ್ ಇದರ ಕೊರಿಯೊಗ್ರಾಫರ್ ಪ್ರೇಮ್ ರಕ್ಷಿತ್‌ಗೂ ಹೋಗುತ್ತದೆ. ನೃತ್ಯದಲ್ಲಿ 95 ಸ್ಟೆಪ್‌ಗಳನ್ನು ಅವರು ಸಂಯೋಜಿಸಿದ್ದಾರೆ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರೂ ಸ್ವಂತ ಶೈಲಿ ಹೊಂದಿದವರು. ಇಬ್ಬರಿಗೂ ಸೂಕ್ತವೆನಿಸುವ ಹೆಜ್ಜೆಗಳು ಬೇಕಿದ್ದವು. ಹಾಗೆ ಅವು ಸೃಷ್ಟಿಯಾದವು.
ಮಧ್ಯೆ ರಾಮ್‌ಚರಣ್, ತಮ್ಮ ಕಾಸ್ಟ್ಯೂಮ್ ಅನ್ನೂ ಡ್ಯಾನ್ಸ್‌ನಲ್ಲಿ ಒಳಗೊಳಿಸಿಕೊಳ್ಳುವ ಬಗ್ಗೆ ಪ್ಲಾನ್ ಕೊಟ್ಟರು. ಹಾಗೆಯೇ ಇಬ್ಬರೂ ತಮ್ಮ ಪ್ಯಾಂಟ್‌ನ ಸ್ಟ್ರಿಪ್‌ಗಳನ್ನು ಬಳಸಿಕೊಳ್ಳುವ ದೃಶ್ಯವೂ ಅಡಕವಾಯಿತು.
ಇದನ್ನೂ ಓದಿ: Oscars 2023: ಯಾರ್ಯಾರು ಯಾವ ಪ್ರಶಸ್ತಿ ಪುರಸ್ಕೃತರು? ಇದುವರೆಗಿನ ಪಟ್ಟಿ
ಒಟ್ಟಾರೆ ಹಾಡಿನಲ್ಲಿ ಇಬ್ಬರೂ ಹೀರೋಗಳು ಬ್ರಿಟಿಷರನ್ನು ಡ್ಯಾನ್ಸ್ ಮೂಲಕ ಎದುರಿಸುತ್ತಾರೆ. ಉಳಿದೆಲ್ಲರೂ ಕುಣಿದು ಸುಸ್ತಾಗಿ ಬಿದ್ದುಹೋಗುತ್ತಾರೆ. ಕೊನೆಗೆ ಹೀರೋಗಳ ನಡುವೆಯೇ ಸ್ಪರ್ಧೆ ಉಂಟಾಗುತ್ತದೆ. ಇದು ಸ್ನೇಹ, ಸ್ಪರ್ಧೆ, ವೈಮನಸ್ಸು ಇತ್ಯಾದಿಗಳ ಕಥೆಯನ್ನೇ ಚಿತ್ರಿಸುತ್ತದೆ.
ವಿಶೇಷವೆಂದರೆ ಈ ಹಾಡನ್ನು ಚಿತ್ರೀಕರಿಸಿದ ತಾಣ ಉಕ್ರೇನ್. ಅಲ್ಲಿನ ಮಾರಿನ್‌ಸ್ಕಿ ಪ್ಯಾಲೇಸ್‌ನ ಮುಂದೆ ಇದನ್ನು ಚಿತ್ರೀಕರಿಸಲಾಗಿದೆ. ಇಲ್ಲಿ ಭಾರತೀಯ ಗ್ರಾಮದ ಚಿತ್ರಣವನ್ನೂ ತರಲು ರಾಜಮೌಳಿ ಪ್ರಯತ್ನಿಸಿದ್ದಾರೆ. ಯುದ್ಧದ ಆತಂಕದ ನಡುವೆಯೂ ಇಲ್ಲಿ ಚಿತ್ರೀಕರಿಸಿದ್ದ ರಾಜಮೌಳಿ ಅವರನ್ನು ಜನ ಕ್ರೇಜಿ ಎಂದು ಕರೆದಿದ್ದರು.
ಸುಮಾರು 15 ದಿನಗಳ ಕಾಲ, ದಿನಕ್ಕೆ 12 ಗಂಟೆಗಳ ಕಾಲ ಚಿತ್ರೀಕರಿಸಿ, 150 ಡ್ಯಾನ್ಸರ್‌ಗಳ ಹಾಗೂ 200 ಸಿಬ್ಬಂದಿಗಳ ನಡುವೆ ಈ ಹಾಡು ಜೀವ ಪಡೆದಿದೆ. ಚಿತ್ರೀಕರಣದಲ್ಲಿ ರಕ್ಷಿತ್ ಪ್ರತಿಬಾರಿ ಟೇಕ್ ಒಕೆ ಎಂದಾಗಲೂ ʼಇನ್ನೊಂದು ಶಾಟ್ʼ ಎಂದು ರಾಜಮೌಳಿ ಹೇಳುತ್ತಿದ್ದರಂತೆ.
ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಈ ಹಾಡು ಚಿತ್ರರಸಿಕರಿಗೆ ಹುಚ್ಚು ಹಿಡಿಸುತ್ತಲೇ ಇದೆ ಎಂದರೆ ಅತಿಶಯೋಕ್ತಿಯಲ್ಲ. ʼʼಈ ಹಾಡು ಇಂದು ನಮ್ಮದಲ್ಲ. ಅದು ಜನರದಾಗಿದೆ. ಎಲ್ಲ ವಯಸ್ಸು, ಎಲ್ಲ ಸಂಸ್ಕೃತಿಗಳ ಜನತೆ ಅದನ್ನು ತಮ್ಮದಾಗಿಸಿಕೊಂಡಿದ್ದಾರೆʼʼ ಎಂದು ಚರಣ್ ಹೇಳಿದ್ದು ಕೂಡ ನಿಜವಾಗಿದೆ. ಜಪಾನ್ ಮತ್ತಿತರ ದೇಶಗಳ ಹಲವರೂ ಈ ಹಾಡಿನ ರೀಲ್‌ಗಳನ್ನು ಮಾಡಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: Oscars 2023 ಗೆದ್ದ RRR ಸಿನಿಮಾದ ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಜಾಗ ಈಗ ಯುದ್ಧದ ಸ್ಥಳ!