ನವದೆಹಲಿ: ಸೋಮವಾರ ಆಸ್ಕರ್ ಘೋಷಣೆಯಾಗುವ ಸ್ಥಳಕ್ಕೆ ಹೋಗುವ ಮುನ್ನ ರಾಮ್ ಚರಣ್ (Ram Charan) ಮತ್ತು ಅವರ ಪತ್ನಿ ಉಪಾಸನಾ ಅವರು ತಮ್ಮ ಮನೆಯಲ್ಲಿರುವ ಚಿಕ್ಕ ದೇಗುಲದಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದರಂತೆ. ಈ ಜೋಡಿ ಎಲ್ಲೇ ಹೋದರೂ, ತಾವಿರುವಲ್ಲೇ ಚಿಕ್ಕ ದೇವಾಲಯವನ್ನು ರೆಡಿ ಮಾಡಿ, ಪೂಜಿಸುತ್ತಾರಂತೆ. ಇದು ಅವರಿಗೆ ಭಾರತದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದಂತೆ. ಈ ಮಾಹಿತಿಯನ್ನು ರಾಮ್ ಚರಣ್ ಅವರು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ರೂಪಿಸಿದ ಚಿಕ್ಕ ದೇಗುಲದ ಫೋಟೋ ತೆಗೆಯಲು ಮಾಧ್ಯಮದವರಿಗೆ ಅವಕಾಶ ಮಾಡಿಕೊಟ್ಟರೆನ್ನಲಾಗಿದೆ(Oscars 2023:).
ಆಸ್ಕರ್‌ಗಾಗಿ ಡಾಲ್ಬಿ ಥಿಯೇಟರ್‌ಗೆ ಹೊರಡುವ ಮೊದಲು ದಂಪತಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂಬುದನ್ನು ನೋಡಲು ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ತಂಡವು ರಾಮ್ ಅವರ ಇರುವ ಮನೆಗೆ ಆಗಮಿಸಿತ್ತು. ಈ ತಂಡವನ್ನು ರಾಮ್ ಅವರು ಸ್ವಾಗತಿಸಿದರು. ಕ್ಯಾಮೆರಾಗಳಿಗೆ ತಮ್ಮ ಬಟ್ಟೆಗಳನ್ನು ತೋರಿಸುವುದರ ಜೊತೆಗೆ, ಅವರು ಪ್ರಪಂಚದ ಎಲ್ಲೇ ಇದ್ದರೂ ಅವರು ಅನುಸರಿಸುವ ಆಚರಣೆಯ ಮಾಹಿತಿಯನ್ನು ರಾಮ್ ಅವರು ಹಂಚಿಕೊಂಡರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಸ್ಕರ್ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ
ಈ ವೇಳೆ ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ಜತೆ ಮಾತನಾಡಿದ ರಾಮ್ ಚರಣ್ ಅವರು, ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಈ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ. ಈ ಆಚರಣೆಯು ನಮ್ಮ ಶಕ್ತಿಗಳು ಮತ್ತು ಭಾರತದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಇಲ್ಲಿರಲು ನಮಗೆ ಸಹಾಯ ಮಾಡಿದ ಎಲ್ಲದಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುವುದು ಮುಖ್ಯ ಎಂದು ಹೇಳಿದರು. ರಾಮ್ ಮತ್ತು ಉಪಾಸನಾ ಸಮಾರಂಭಕ್ಕೆ ಹೊರಡುವ ಮೊದಲು ಒಂದು ಸಣ್ಣ ಪ್ರಾರ್ಥನೆಯನ್ನು ಮಾಡಿದರು ಎಂದು ವರದಿಯಾಗಿದೆ.