Site icon Vistara News

Oscars 2023 : ಆಸ್ಕರ್ ಪಡೆದ ಭಾರತದ ಮೊದಲ ವ್ಯಕ್ತಿ ಯಾರು? ಈವರೆಗೆ ಎಷ್ಟು ಭಾರತೀಯರಿಗೆ ಆಸ್ಕರ್ ಬಂದಿದೆ?

Oscars 2023, Who was the first Indian to win an Oscar?

ಬೆಂಗಳೂರು: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ನಾಟು ನಾಟು… ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ (Oscars 2023) ಲಭಿಸಿದೆ. ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಮತ್ತು ಗೀತ ರಚನೆಕಾರರಾದ ಚಂದ್ರಬೋಸ್ ಅವರು ಆಸ್ಕರ್ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಆಸ್ಕರ್ ಗೆದ್ದ ಸಂಪೂರ್ಣ ಭಾರತೀಯ ಚಿತ್ರ ಎಂಬ ಕೀರ್ತಿಗೆ ಆರ್‌ಆರ್‌ಆರ್ ಪಾತ್ರವಾಗಿದೆ. ಆದರೆ, ಭಾರತಕ್ಕೆ ಮೊಟ್ಟ ಮೊದಲ ಆಸ್ಕರ್ ತಂದುಕೊಟ್ಟವರಾರು ಗೊತ್ತಾ? ಈ ವರೆಗೆ ಎಷ್ಟು ಆಸ್ಕರ್ ಪ್ರಶಸ್ತಿಗಳು ಭಾರತಕ್ಕೆ ಲಭಿಸಿವೆ, ಇಲ್ಲಿದೆ ನೋಡಿ ಮಾಹಿತಿ.

ಭಾನು ಅಥಿಯಾ, ಮೊದಲ ಆಸ್ಕರ್ ವಿಜೇತೆ

ಗಾಂಧಿ ಚಿತ್ರದ ಬೆಸ್ಟ್ ಕಾಸ್ಟೂಮ್ ಡಿಸೈನ್ ಕೆಟಗರಿಯಲ್ಲಿ ಭಾನು ಅಥಿಯಾ ಅವರು ಆಸ್ಕರ್ ಗೆದ್ದುಕೊಂಡಿದ್ದರು. ಇದು 40 ವರ್ಷಗಳ ಹಿಂದಿನ ಮಾತು. ಮಹಾತ್ಮ ಗಾಂಧಿ ಜೀವನಾಧರಿತ ಸಿನಿಮಾವನ್ನು ರಿಚರ್ಡ್ ಅಟೆನ್‌ಬ್ಯೂರೋ ಅವರು ನಿರ್ದೇಶನ ಮಾಡಿದ್ದರು.

ಸತ್ಯಜಿತ್ ರೇ ಅವರಿಗೆ ಆಸ್ಕರ್ ಪ್ರಶಸ್ತಿ

ಭಾರತದ ದಂತಕತೆ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಜೀವಮಾನ ಸಾಧನೆಗಾಗಿ 1992ರಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ.

ಎ ಆರ್ ರೆಹಮಾನ್, ಗುಲ್ಜಾರ್- ಬೆಸ್ಟ್ ಒರಿಜಿನಲ್ ಸಾಂಗ್

2009ರ ಸಾಲಿನ ಆಸ್ಕರ್ ಪ್ರಶಸ್ತಿಯಲ್ಲಿ ಸಿಂಹಪಾಲು ಗಳಿಸಿದ್ದ ಡ್ಯಾನಿ ಬೊಯ್ಲೆ ನಿರ್ದೇಶನದ ಸ್ಲಮ್ ಡಾಗ್ ಮಿಲಿಯೇನರ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಎ ಆರ್ ರೆಹಮಾನ್ ಎರಡು ಆಸ್ಕರ್ ಗಳಿಸಿದ್ದರು(ಜೈ ಹೋ- ಒರಿಜಿನಲ್ ಸಾಂಗ್ ಮತ್ತು ಹಿನ್ನೆಲೆ ಸಂಗೀತ). ಜೈ ಹೋ ಹಾಡಿಗೆ ಗುಲ್ಜಾರ್ ಅವರು ಗೀತ ಸಾಹಿತ್ಯವನ್ನು ಒದಗಿಸಿದ್ದರು.

ರಸೂಲ್ ಪೂಕುಟ್ಟಿ, ಬೆಸ್ಟ್ ಸೌಂಡ್ ಮಿಕ್ಸಿಂಗ್

ಸ್ಲಮ್ ಡಾಗ್ ಮಿಲಿಯೇನರ್ ಚಿತ್ರಕ್ಕಾಗಿ ಮೊತ್ತಬ್ಬ ಭಾರತೀಯನಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಚಿತ್ರದ ಸೌಂಡ್ ಮಿಕ್ಸಿಂಗ್‌ಗಾಗಿ ರಸೂಲ್ ಪೂಕಟ್ಟಿ ಅವರಿಗೆ ಆಸ್ಕರ್ ದೊರೆತಿತ್ತು.

ಆಸ್ಕರ್‌ಗೆ ನಾಮಿನೇಟ್ ಆದ ಭಾರತೀಯ ಚಿತ್ರಗಳು

ಮದರ್ ಇಂಡಿಯಾ(1957)

ಬಾಲಿವುಡ್‌ನ ಅತ್ಯಂತ ಜನಪ್ರಿಯ ಸಿನಿಮಾ ಮದರ್ ಇಂಡಿಯಾ. ಆಸ್ಕರ್‌ನ ಫಾರೀನ್ ಲ್ಯಾಂಗ್ವೇಜ್ ಫಿಲ್ಮ್ ಕೆಟಗರಿಯಲ್ಲಿ ನಾಮಿನೇಟ್ ಆದ ಭಾರತ ಮೊದಲ ಸಿನಿಮಾ ಇದು. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮೀಣ ಭಾರತದ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಬೆಳೆಸುವ ಕಥಾಹಂದರವನ್ನು ಹೊಂದಿತ್ತು. ಮೆಹಬೂಬ್ ಖಾನ್ ಅವರು ಈ ಸಿನಿಮಾದ ನಿರ್ದೇಶಕರು.

ಸಲಾಮ್ ಬಾಂಬೆ(1988)

ಮೀರಾ ನಾಯರ್ ನಿರ್ದೇಶನದ ಸಲಾಂ ಬಾಂಬೆ ಚಿತ್ರವು ಆಸ್ಕರ್‌ನ ಬೆಸ್ಟ್ ಫಾರೀನ್ ಲ್ಯಾಂಗ್ವೆಜ್ ಕೆಟಗರಿಯಲ್ಲಿ ನಾಮಿನೇಟ್ ಆಗಿತ್ತು. ಮುಂಬೈನಲ್ಲಿ ಬೀದಿ ಮಕ್ಕಳ ನರಕಯಾತನೆಯ ಬದಕನ್ನು ತೆರೆದಿಡುವಂಥ ಕಥಾವಸ್ತುವನ್ನು ಈ ಚಿತ್ರ ಹೊಂದಿತ್ತು.

ಲಗಾನ್(2001)

ಹಿಂದಿ ಚಿತ್ರರಂಗದ ಮಿ. ಪರ್ಫೆಕ್ಷನಿಸ್ಟ್ ಎಂದೇ ಕರೆಯಿಸಿಕೊಳ್ಳುವ ಆಮೀರ್ ಖಾನ್ ಅಭಿನಯ ಹಾಗೂ ನಿರ್ಮಾಣದ ಲಗಾನ್ ಭಾರತದ ಯಶಸ್ವಿ ಚಿತ್ರಗಳಲ್ಲಿ ಒಂದು. ಅಶುತೋಷ್ ಗೋವಾರಿಕರ್ ಅವರು ಈ ಚಿತ್ರದ ನಿರ್ದೇಶಕರು. ಈ ಸಿನಿಮಾ ಕೂಡ ಬೆಸ್ಟ್ ಫಾರೀನ್ ಲ್ಯಾಂಗ್ವೇಜ್ ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು. ಪ್ರಶಸ್ತಿ ಗೆಲ್ಲುವ ನಿರೀಕ್ಷೆಗಳಿದ್ದವಾದರೂ, ಆದರೆ ಕೈಗೂಡಲಿಲ್ಲ. ಕ್ರಿಕೆಟ್ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಚುರುಕು ಮುಟ್ಟಿಸುವ ಕಥಾವಸ್ತುವನ್ನು ಲಗಾನ್ ಚಿತ್ರವು ಹೊಂದಿತ್ತು.

ಇದನ್ನೂ ಓದಿ: Oscars 2023: ಇತಿಹಾಸ ಸೃಷ್ಟಿಸಿದ RRR ಸಿನಿಮಾ, ನಾಟು ನಾಟು… ಹಾಡಿಗೆ ಆಸ್ಕರ್ ಪ್ರಶಸ್ತಿ!

ಹಲವು ಕಿರು ಮತ್ತು ಸಾಕ್ಷ್ಯ ಚಿತ್ರಗಳಿಗೆ ಪ್ರಶಸ್ತಿ

ಭಾರತದ ಹಲವು ಕಿರು ಮತ್ತು ಸಾಕ್ಷ್ಯ ಚಿತ್ರಗಳಿಗೂ ಆಸ್ಕರ್ ಪ್ರಶಸ್ತಿ ಲಭಿಸಿವೆ. 2023ರ ಸಾಲಿನಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಎಂಬ ಕಿರು ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ದೊರೆತಿದೆ. ಪ್ರತಿ ವರ್ಷವೂ ಈ ಎರಡೂ ಕೆಟಗರಿಯಲ್ಲಿ ಭಾರತದ ಚಿತ್ರಗಳು ಇದ್ದೇ ಇರುತ್ತವೆ.

Exit mobile version