ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಾಲ್ಕು ವರ್ಷದ ಹಿಂದೆ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಗೆ ನಾಲ್ಕು (Pulwama Attack) ವರ್ಷ ತುಂಬಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶಾದ್ಯಂತ ಜನ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಪುಲ್ವಾಮಾ ದಾಳಿಗೆ ಸಂಚು ರೂಪಿಸಿದ ಉಗ್ರರ ಹತ್ಯೆ ಕುರಿತು ಕಾಶ್ಮೀರ ವಲಯದ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
“ಪುಲ್ವಾಮಾ ದಾಳಿಗೆ ಸಂಚು ರೂಪಿಸಿದ ೧೯ ಉಗ್ರರಲ್ಲಿ ೮ ಉಗ್ರರನ್ನು ಹೊಡೆದುರುಳಿಸಲಾಗಿದೆ. ೭ ಉಗ್ರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಇನ್ನೂ ನಾಲ್ವರು ಪಾಕಿಸ್ತಾನದಲ್ಲಿದ್ದಾರೆ” ಎಂದು ತಿಳಿಸಿದರು. “ಕಣಿವೆಯಲ್ಲಿ ೩೭ ಉಗ್ರರು ಸಕ್ರಿಯರಾಗಿದ್ದಾರೆ. ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ಶೀಘ್ರದಲ್ಲಿಯೇ ಜೈಶೆ ಮೊಹಮ್ಮದ್‌ನ ಮೂಸಾ ಸುಲೆಮನಿ, ಪಾಕಿಸ್ತಾನದ ಉಗ್ರರು ಸೇರಿ ೭-೮ ಉಗ್ರರನ್ನು ಹತ್ಯೆ ಮಾಡಲಾಗುವುದು” ಎಂದರು.
೨೦೧೯ರ ಫೆಬ್ರವರಿ ೧೪ರಂದು ಪುಲ್ವಾಮಾದಲ್ಲಿ ಸೇನಾ ವಾಹನಗಳ ಮೇಲೆ ಜೈಶೆ ಮೊಹಮ್ಮದ್‌ನ ಉಗ್ರನು ಆತ್ಮಾಹುತಿ ದಾಳಿ ನಡೆಸಿದ. ಭೀಕರ ದಾಳಿಯಲ್ಲಿ ಭಾರತದ ೪೦ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಭಾರತವು ಬಾಲಾಕೋಟ್ ದಾಳಿ ಮೂಲಕ ಜೈಶೆ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಅಲ್ಲದೆ, ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಿದೆ.
ಇದನ್ನೂ ಓದಿ: ವಿಸ್ತಾರ Explainer: ಜರಾ ಯಾದ್ ಕರೋ ಕುರ್ಬಾನಿ… ಪುಲ್ವಾಮಾ ದಾಳಿಗೆ 4 ವರ್ಷ, ಹುತಾತ್ಮರ ನೆನೆಯೋಣ, ಶೌರ್ಯ ಸ್ಮರಿಸೋಣ