Site icon Vistara News

ಮತಾಂತರದಿಂದಲೇ ಜನಸಂಖ್ಯೆ ಅಸಮತೋಲನ, ಹೊಸಬಾಳೆ ಹೇಳಿಕೆಗೆ ಪ್ರತಿಪಕ್ಷಗಳಿಂದ ಆಕ್ರೋಶ

Dattatreya Hosabale

ಲಖನೌ: ದೇಶದಲ್ಲಿ ಮತಾಂತರ ಹಾಗೂ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರಿಂದಲೇ ಜನಸಂಖ್ಯೆಯ ಅಸಮತೋಲನ ಉಂಟಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನೀಡಿದ ಹೇಳಿಕೆಗೆ ಪ್ರತಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. “ದತ್ತಾತ್ರೇಯ ಹೊಸಬಾಳೆ ನೀಡಿದ ಹೇಳಿಕೆಯು ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವಂತಿದೆ” ಎಂದು ಕಾಂಗ್ರೆಸ್‌ ಸೇರಿ ಹಲವು ಪ್ರತಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಬಾಳೆ ಹೇಳಿದ್ದೇನು?

“ದೇಶಾದ್ಯಂತ ಅವ್ಯಾಹತವಾಗಿ ಮತಾಂತರ ನಡೆಯುತ್ತಿದ್ದು, ಬಾಂಗ್ಲಾದೇಶದಿಂದ ಬಂದು ನೆಲೆಸುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ಜಾಸ್ತಿಯಾಗಿದೆ. ಹಾಗೆಯೇ, ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನಿನ ಅಗತ್ಯವಿದೆ. ಎಲ್ಲ ಧರ್ಮದವರಿಗೂ ಅನ್ವಯವಾಗುವ ದಿಸೆಯಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೆ ತರಬೇಕು. ಆಗ ಮಾತ್ರ, ದೇಶದಲ್ಲಿ ಉಂಟಾಗಿರುವ ಜನಸಂಖ್ಯೆ ಅಸಮತೋಲನವು ಸರಿಯಾಗಲಿದೆ” ಎಂದು ಪ್ರಯಾಗರಾಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದರು.

ಪ್ರತಿಪಕ್ಷಗಳ ಆಕ್ರೋಶವೇನು?

ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಸುರೇಂದ್ರ ರಜಪೂತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಲ್ಲಿರುವವರಿಗೆ ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೊತ್ತಿದೆಯೇ? ಮತಾಂತರಗೊಂಡ ನಂತರ ಅವರು ಮೀಸಲಾತಿ ಪಡೆಯುವುದಿಲ್ಲ. ಆದರೆ, ದೇಶದಲ್ಲಿ ಜನರ ಮನಸ್ಸುಗಳನ್ನು ಒಡೆಯಲು, ಸಾಮರಸ್ಯಕ್ಕೆ ಕುಂದುಂಟು ಮಾಡಲು ಆರ್‌ಎಸ್‌ಎಸ್‌ ನಾಯಕರು ಇಂತಹ ಹೇಳಿಕೆ ನೀಡುತ್ತಾರೆ. ಇದು ಓಲೈಕೆ ರಾಜಕಾರಣದ ದ್ಯೋತಕವೂ ಆಗಿದೆ” ಎಂದಿದ್ದಾರೆ.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಎಂದ ಎಸ್‌ಪಿ

ಸಮಾಜವಾದಿ ಪಕ್ಷದ ವಕ್ತಾರ ನಿತೇಂದ್ರ ಸಿಂಗ್‌ ಯಾದವ್‌ ಕೂಡ ಹೊಸಬಾಳೆ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. “ಹೊಸಬಾಳೆ ನೀಡಿದ ಹೇಳಿಕೆ ಅಸಾಂವಿಧಾನಿಕವಾಗಿದೆ. ದೇಶದಲ್ಲಿರುವ ಎಲ್ಲರ ಡಿಎನ್‌ಎ ಒಂದೇ ಆಗಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳುತ್ತಾರೆ. ಈಗ ಹೊಸಬಾಳೆ ಅವರು ದೇಶದ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ. ಇಂತಹ ಅಂಶಗಳನ್ನು ಎಲ್ಲರೂ ಖಂಡಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಜನಸಂಖ್ಯಾ ನಿಯಂತ್ರಣ ಬೆಂಬಲಿಸಿದ ಮೋಹನ್‌ ಭಾಗವತ್‌ರನ್ನು ಉಗ್ರವಾದಿ ಎಂದ ಕಾಂಗ್ರೆಸ್‌ ನಾಯಕ

Exit mobile version