ನವ ದೆಹಲಿ: ಕಾರ್ಪೋರೇಟ್ ಅಲ್ಲದ, ಕೃಷಿಯೇತರವಾಗಿರುವ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳಿಗೆ ಸಾಲ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ 2015ರ ಏಪ್ರಿಲ್ 8ರಂದು ಜಾರಿಗೊಳಿಸಿರುವ ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY-Pradhan Mantri MUDRA Yojana)ಗೆ ಇಂದು ಸರಿಯಾಗಿ 8ವರ್ಷ. ಇದೇ ವೇಳೆ ಯೋಜನೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಪ್ರಧಾನಮಂತ್ರಿ ಮುದ್ರಾ ಯೋಜನೆ ಪ್ರಾರಂಭವಾದಾಗಿನಿಂದ 24-03-2023ರವರೆಗೆ ಈ ಯೋಜನೆಯಡಿ 40.82 ಕೋಟಿ ಸಾಲದ ಖಾತೆಗಳಿಗೆ (ಅಂದರೆ ಸಾಲದ ಅನುಕೂಲ ಪಡೆದ ಜನರು) 23.2 ಲಕ್ಷ ಕೋಟಿ ರೂಪಾಯಿ ಸಾಲ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ ಅಂದರೆ ಅನುಕೂಲ ಪಡೆದ ಅಕೌಂಟ್ಗಳಲ್ಲಿ ಶೇ.68 ಖಾತೆಗಳು ಮಹಿಳಾ ಉದ್ಯಮಿಗಳಿಗೆ ಸೇರಿದ್ದಾಗಿದೆ. ಇದರಲ್ಲಿ ಶೇ.51ರಷ್ಟು ಖಾತೆಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಮತ್ತು ಇತರೆ ಹಿಂದುಳಿದ ಜಾತಿ (OBC) ವರ್ಗಗಳಿಗೆ ಸೇರಿದ್ದು. ದೇಶದಲ್ಲಿ ಉದಯೋನ್ಮುಖ ಉದ್ಯಮಿಗಳಿಗೆ ಸಾಲಸೌಲಭ್ಯ ಎಷ್ಟು ಸರಳವಾಗಿ ದೊರೆಯುತ್ತಿದೆ ಮತ್ತು ಅದನ್ನು ಹೇಗೆ ಅವರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಡೇಟಾ ಸಾಕ್ಷಿ. ಹಾಗೇ, ದೇಶದ ತಲಾ ಆದಾಯ ಹೆಚ್ಚಳಕ್ಕೂ ಮುದ್ರಾ ಯೋಜನೆ ಕಾರಣವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಇದನ್ನೂ ಓದಿ: ಡೆಟೊಲ್ ಹಾಕಿ ಬಾಯಿ ತೊಳೆದುಕೊಳ್ಳಿ; ಕಾಂಗ್ರೆಸ್ಗೆ ತಿರುಗೇಟು ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
‘ಪ್ರಧಾನಮಂತ್ರಿ ಮುದ್ರಾ ಯೋಜನೆಯು ಸ್ಥಳೀಯವಾಗಿ, ತಳಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಸಹಾಯ ಮಾಡಿದೆ. ಈ ಮೂಲಕ ಭಾರತದ ಆರ್ಥಿಕತೆ ಉತ್ತೇಜನದ ವಿಷಯದಲ್ಲಿ ಒಂದು ಗೇಮ್ಚೇಂಜರ್ ಆಗಿದೆ ಎಂದು ಹೇಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎಂಎಸ್ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು)ಗಳು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಅಪಾರ ಕೊಡುಗೆ ನೀಡುತ್ತಿವೆ. ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಿಸಿ, ದೇಶಿಯ ಮಾರುಕಟ್ಟೆ ಅಭಿವೃದ್ಧಿ ಮತ್ತು ರಫ್ತು ಹೆಚ್ಚಳಕ್ಕೆ ಕಾರಣವಾಗಿವೆ’ ಎಂದು ವಿವರಣೆ ನೀಡಿದರು. ಅಂದಹಾಗೇ, ಎಂಎಸ್ಎಂಇಗಳಿಗೆ ಕೇಂದ್ರ ಸರ್ಕಾರ ಕಿಶೋರ ಮುದ್ರಾ ಯೋಜನೆಯಡಿಗೆ 5 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದೆ.
ಅಂದಹಾಗೇ, ಕೇಂದ್ರ ಸರ್ಕಾರ ಈ ಮುದ್ರಾ ಯೋಜನೆಯಡಿ ಸಾಲ ಮಂಜೂರಾತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದೆ. ಫಲಾನುಭವಿಗಳು ಶುರು ಮಾಡುತ್ತಿರುವ ಉದ್ಯಮಕ್ಕೆ ಹಣಕಾಸಿನ ಅಗತ್ಯತೆ ಮತ್ತು ಆ ಉದ್ಯಮ ಯಾವ ಮಟ್ಟದ್ದು, ಎಂಥ ಸ್ವರೂಪದ್ದು ಎಂಬುದನ್ನು ಆಧರಿಸಿ ಈ ವರ್ಗಗಳನ್ನು ಮಾಡಲಾಗಿದೆ. ಶಿಶು, ಕಿಶೋರ ಮತ್ತು ತರುಣ ಎಂಬ ಮೂರು ವಿಭಾಗಗಳಿದ್ದು, ಅದರಲ್ಲಿ ಶಿಶು ವರ್ಗದಡಿ 50 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ. ಕಿಶೋರ ಕೆಟೆಗರಿಯಡಿ 50 ಸಾವಿರ ರೂ.ಗೂ ಮೇಲ್ಪಟ್ಟು ಮತ್ತು ತರುಣ ವಿಭಾಗದಡಿ 5 ಲಕ್ಷ ರೂ.ದಿಂದ 10 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುತ್ತದೆ. ಆರ್ಬಿಐನ ಮಾರ್ಗಸೂಚಿಯನ್ವಯ ಬಡ್ಡಿದರ ವಿಧಿಸಲಾಗುತ್ತಿದೆ.