ನವದೆಹಲಿ: ಕೇಂದ್ರ ಸರ್ಕಾರವು 2014ರಲ್ಲಿ ಜಾರಿಗೆ ತಂದ ಜನಧನ್ ಯೋಜನೆ ಅಡಿಯಲ್ಲಿ ಇದುವರೆಗೆ 50 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು (Jan Dhan Accounts) ತೆರೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಧಾನಮಂತ್ರಿ ಜನ-ಧನ್ ಯೋಜನೆ (PMJDY) ಅಡಿಯಲ್ಲಿ ತೆಗೆದ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದ್ದು, ಶೇ.56ರಷ್ಟು ಮಹಿಳೆಯರೇ ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಜನಧನ್ ಬ್ಯಾಂಕ್ ಖಾತೆ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ಮಹತ್ವದ ಮೈಲುಗಲ್ಲು. ಅರ್ಧಕ್ಕಿಂತ ಹೆಚ್ಚಿನ ಜನಧನ್ ಬ್ಯಾಂಕ್ ಖಾತೆಗಳು ನಮ್ಮ ನಾರಿಶಕ್ತಿಗೆ ಸೇರಿರುವುದು ಸಂತಸದ ವಿಷಯವಾಗಿದೆ. ಅರೆ-ನಗರ (Semi-Urban ಅಥವಾ ಪಟ್ಟಣ)ಗಳಲ್ಲಿ ಶೇ.67ರಷ್ಟು ಜನ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಕೂಡ ಹಣದ ಹರಿವು ಹೆಚ್ಚಾಗಲು ಕಾರಣವಾಗಿದೆ” ಎಂದು ಎಕ್ಸ್ (ಟ್ವೀಟ್) ಮಾಡಿದ್ದಾರೆ.
ಕೇಂದ್ರ ಸರ್ಕಾರವು 2014ರಲ್ಲಿ ಜನರಿಗೆ ಒಂದು ಬ್ಯಾಂಕ್ ಖಾತೆ ಇರಬೇಕು ಎಂಬ ದೃಷ್ಟಿಯಿಂದ ಜನಧನ್ ಯೋಜನೆ ಜಾರಿಗೆ ತಂದಿದೆ. ಅದರಂತೆ ಇದುವರೆಗೆ ತೆರೆಯಲಾದ 50 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳಲ್ಲಿ 2.03 ಲಕ್ಷ ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ. ಹಾಗೆಯೇ, ಸರ್ಕಾರವು ಉಚಿತವಾಗಿ 34 ಕೋಟಿ ರುಪೇ ಕಾರ್ಡ್‌ಗಳನ್ನು ವಿತರಿಸಿದೆ. ಪಿಎಂಜೆಡಿವೈ ಖಾತೆಗಳಲ್ಲಿ ಸರಾಸರಿ 4,076 ರೂಪಾಯಿಯಿಂದ 5.5 ಕೋಟಿ ರೂಪಾಯಿವರೆಗೆ ಠೇವಣಿ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: PM Modi Speech In Rajya Sabha: ಖರ್ಗೆ ನಾಡಲ್ಲಿ 1.7 ಕೋಟಿ ಜನ ಧನ್ ಖಾತೆ ಓಪನ್, ಮೇಲ್ಮನೆಯಲ್ಲಿ ಕುಟುಕಿದ ಮೋದಿ
ನರೇಂದ್ರ ಮೋದಿ ಅವರು 2014ರ ಆಗಸ್ಟ್ 15ರಂದು ಜನಧನ್ ಯೋಜನೆ ಘೋಷಿಸಿದರು. ಅದರಂತೆ, ಅದೇ ವರ್ಷದ ಆಗಸ್ಟ್ 28ರಂದು ಯೋಜನೆ ಜಾರಿಗೆ ತರಲಾಯಿತು. ಯಾವುದೇ ಠೇವಣಿ ಇಲ್ಲದೆ ಜನಧನ್ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. ಹಾಗೆಯೇ, ಬ್ಯಾಂಕ್ ಖಾತೆ ಇರುವವರಿಗೆ ಎರಡು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆಯೂ ಸಿಗುತ್ತದೆ. ಜನಧನ್ ಬ್ಯಾಂಕ್ ಖಾತೆಗಳು ನೇರವಾಗಿ ಹಣ ವರ್ಗಾಯಿಸುವಲ್ಲಿ (DBT) ಮಹತ್ತರ ಪಾತ್ರ ನಿರ್ವಹಿಸಿವೆ.