Site icon Vistara News

P20 Summit: ವಿಶ್ವದ ಪ್ರಜಾಪ್ರಭುತ್ವಕ್ಕೆ ಭಾರತವೇ ತಾಯಿ; ನರೇಂದ್ರ ಮೋದಿ ಬಣ್ಣನೆ

PM Modi rejected about a gay sex, adultery in new criminal laws

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಯಶಸ್ವಿಯಾಗಿ ಜಿ20 ಶೃಂಗಸಭೆ ಆಯೋಜನೆಗೊಂಡ ಬೆನ್ನಲ್ಲೇ ಜಿ20 ಸದಸ್ಯ ರಾಷ್ಟ್ರಗಳ ಸಂಸದೀಯ ಭಾಷಣಕಾರರ (Parliamentary Speakers) 9ನೇ ಸಭೆ (P20 Summit) ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯನ್ನು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವದ ಹೆಗ್ಗಳಿಕೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಹಾಗೆಯೇ, “ಜಗತ್ತಿನಲ್ಲಿ ಸಂಸದೀಯ ಆಚರಣೆಗಳ ಪಾಲನೆಗೆ ಪಿ20 ಸಭೆಯು ಮಹಾಕುಂಭ ಇದ್ದಂತೆ” ಎಂದು ಬಣ್ಣಿಸಿದರು.

“ಪಿ20 ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಭಾಷಣಕಾರರು, ಪ್ರತಿನಿಧಿಗಳನ್ನು 140 ಕೋಟಿ ಭಾರತೀಯರ ಪರವಾಗಿ ಸ್ವಾಗತ ಕೋರುತ್ತೇನೆ. ಜಗತ್ತಿನೆಲ್ಲೆಡೆಯೂ ಚರ್ಚೆ, ಸಂವಾದಗಳಿಗಾಗಿ ಸಂಸತ್ತುಗಳು ಬೇಕೇಬೇಕು. ವಿಶ್ವದಲ್ಲಿ ಸಂಸದೀಯ ಆಚರಣೆಗಳಿಗೆ ಈಗ ನಡೆಯುತ್ತಿರುವ ಸಭೆಯು ಮಹಾಕುಂಭ ಇದ್ದಂತೆ” ಎಂದು ಹೇಳಿದರು. ಜಪಾನ್‌, ಇಟಲಿ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ ಸೇರಿ ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡರು. ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಕಾರಣ ಕೆನಡಾ ಪ್ರತಿನಿಧಿ ಭಾಗವಹಿಸಿಲ್ಲ.

ಭಾರತ ಜಗತ್ತಿನ ಪ್ರಜಾಪ್ರಭುತ್ವದ ತಾಯಿ

ಭಾಷಣದ ಮಧ್ಯೆಯೇ ಭಾರತದ ಪ್ರಜಾಪ್ರಭುತ್ವದ ಕುರಿತು ನರೇಂದ್ರ ಮೋದಿ ಮಾತನಾಡಿದರು. “ಭಾರತದಲ್ಲಿ ಪಿ20 ಶೃಂಗಸಭೆ ಆಯೋಜನೆಗೊಂಡಿರುವುದು ಸಂತಸದ ಸಂಗತಿ. ಶೃಂಗಸಭೆಯು ದೇಶದ ಜನಶಕ್ತಿಯನ್ನು ಸಂಭ್ರಮಿಸುವ ವೇದಿಕೆಯಾಗಿದೆ. ಏಕೆಂದರೆ, ಭಾರತವು ಜಗತ್ತಿನ ಪ್ರಜಾಪ್ರಭುತ್ವದ ತಾಯಿಯಾಗಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೂ ಭಾರತವೇ ಆಗಿದೆ” ಎಂದು ಹೇಳಿದರು. “ಭಾರತವು ಗಡಿ ಭಯೋತ್ಪಾದನೆಯನ್ನು ಯಶಸ್ವಿಯಾಗಿ ನಿಗ್ರಹಿಸುತ್ತಿದೆ. ಚಂದ್ರಯಾನ 3 ಮಿಷನ್‌ಅನ್ನೂ ಯಶಸ್ವಿಯಾಗಿ ಕೈಗೊಂಡಿದೆ. ಜಿ20 ಶೃಂಗಸಭೆ ಆಯೋಜಿಸಿದೆ. ಇದರಲ್ಲಿ ಜಗತ್ತಿನ ಒಳಿತೂ ಅಡಗಿದೆ” ಎಂದರು.

ಇದನ್ನೂ ಓದಿ: Unemployment Rate: 6 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ನಿರುದ್ಯೋಗ ದರ ಎಂದ ಪ್ರಧಾನಿ ನರೇಂದ್ರ ಮೋದಿ

ಶಾಂತಿಸ್ಥಾಪನೆಗೆ ಮೋದಿ ಕರೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಸಮರ ನಡೆಯುತ್ತಿರುವ ಬೆನ್ನಲ್ಲೇ, ಜಗತ್ತಿನ ಎಲ್ಲರೂ ಒಗ್ಗೂಡಿ ಹೆಜ್ಜೆ ಹಾಕೋಣ ಎಂದು ನರೇಂದ್ರ ಮೋದಿ ಕರೆ ನೀಡಿದರು. “ಬೇರೆ ಬೇರೆಯಾಗಿ ಛಿದ್ರಗೊಂಡ ಜಗತ್ತು ಎಂದಿಗೂ ನಮ್ಮೆದುರು ಇರುವ ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯವಾಗುವುದಿಲ್ಲ. ಈಗ ಏನಿದ್ದರೂ ಶಾಂತಿ ಹಾಗೂ ಸಹೋದರತ್ವ ಸಾರುವ ಸಮಯ. ಎಲ್ಲರೂ ಅಭಿವೃದ್ಧಿ, ಶಾಂತಿ, ಸ್ಥಿರತೆಗಾಗಿ ಒಗ್ಗಟ್ಟಾಗಿ ಇರೋಣ” ಎಂದು ಹೇಳಿದರು.

ಭಯೋತ್ಪಾದನೆ ವಿರುದ್ಧ ಹೋರಾಡೋಣ

“ಗಡಿ ಭಯೋತ್ಪಾದನೆ ವಿರುದ್ಧ ಭಾರತ ಯಶಸ್ವಿಯಾಗಿ ಹೋರಾಟ ಮಾಡುತ್ತಿದೆ. 20 ವರ್ಷದ ಹಿಂದೆ ನಮ್ಮ ಸಂಸತ್ತಿನ ಮೇಲೆಯೇ ದಾಳಿ ಮಾಡಲಾಗಿತ್ತು. ಆದರೀಗ, ಭಾರತವು ಯಶಸ್ವಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಜಗತ್ತಿನ ಶಾಂತಿ, ಸ್ಥಿರತೆ ಹಾಗೂ ಅಭಿವೃದ್ಧಿಗೆ ಉಗ್ರವಾದವು ದೊಡ್ಡ ಶತ್ರುವಾಗಿದೆ. ಹಾಗಾಗಿ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಜಗತ್ತು ಒಗ್ಗೂಡಬೇಕು” ಎಂದರು. ಶೃಂಗಸಭೆಯಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಕೂಡ ಮಾತನಾಡಿದರು.

Exit mobile version