ಲಖನೌ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ, ಸಕಾರಾತ್ಮಕ ಹಠ, ಗುರಿಯೆಡೆಗೆ ಸಾಗುವ, ಅದನ್ನು ಮುಟ್ಟಿಯೇ ತೀರಬೇಕು ಎಂಬ ಮನೋಭಾವನೆ, ತುಡಿತ ಇದ್ದರೆ ಎಲ್ಲವನ್ನೂ ಸಾಧಿಸಬಹುದು. ಇಂತಹ ಸ್ಫೂರ್ತಿದಾಯಕ ಮಾತುಗಳಿಗೆ ದ್ಯೋತಕ ಎಂಬಂತೆ ಉತ್ತರ ಪ್ರದೇಶದಲ್ಲಿ ಪಾನ್ ಶಾಪ್ ಮಾಲೀಕನ ಪುತ್ರಿ, ಜ್ಯೋತಿ ಚೌರಾಸಿಯಾ ಎಂಬ ದಿಟ್ಟೆಯು ಕಷ್ಟದಲ್ಲಿ ಓದಿ ಈಗ ಮ್ಯಾಜಿಸ್ಟ್ರೇಟ್ ಆಗಿ (Success Story) ಆಯ್ಕೆಯಾಗಿದ್ದಾರೆ. ಆ ಮೂಲಕ ತಂದೆಯ ಕನಸನ್ನು ನನಸು ಮಾಡಿದ್ದಾರೆ.
ಹೌದು, ಉತ್ತರ ಪ್ರದೇಶದ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (UPPSC) 21ನೇ ರ‍್ಯಾಂಕ್ ಪಡೆದಿರುವ ಜ್ಯೋತಿ ಚೌರಾಸಿಯಾ, ಗೊಂಡಾ ಜಿಲ್ಲೆಯ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ (SDM) ಆಗಿ ನೇಮಕಗೊಂಡಿದ್ದಾರೆ. ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಜ್ಯೋತಿ, ಗೊಂಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ರೋಷನ್ ಜಾಕೋಬ್ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಸತತ ಅಧ್ಯಯನ ಮಾಡಿದ್ದಾರೆ. ಅವರು ವಹಿಸಿದ ಶ್ರಮವೀಗ ಪ್ರತಿಫಲ ನೀಡಿದ್ದು, ಅವರ ಕುಟುಂಬಸ್ಥರು, ಸಹೋದ್ಯೋಗಿಗಳು, ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.
ವೃತ್ತಿಜೀವನ ತಂದೆಯ ಕನಸಾಗಿತ್ತು
ಜ್ಯೋತಿ ಅವರ ತಂದೆ ಹೇಮಚಂದ್ ಚೌರಾಸಿಯಾ ಅವರಿಗೂ ವೃತ್ತಿ ಜೀವನ ಆರಂಭಿಸಬೇಕು, ಉತ್ತಮ ಜೀವನ ಸಾಗಿಸಬೇಕು ಎಂಬ ಬಯಕೆ ಇತ್ತು. ಆದರೆ, ಹಣಕಾಸು ತೊಂದರೆ, ಕುಟುಂಬವನ್ನು ಪೊರೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಅವರು ಗೊಂಡಾದಲ್ಲಿ 1997 ಪಾನ್‌ಶಾಪ್ ಆರಂಭಿಸಿದರು. ಒಳ್ಳೆಯ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಕನಸಿಗೆ ಎಳ್ಳು-ನೀರು ಬಿಟ್ಟು, ಪಾನ್ ಶಾಪ್‌ನಲ್ಲಿ ಬೀಡಾ ಕಟ್ಟುವ ಕೆಲಸ ಆರಂಭಿಸಿದರು. ಆದರೆ, ಹೇಮಚಂದ್ ಅವರು ತಮ್ಮ ಇಬ್ಬರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-7, ನಿಮಗೆ ಸ್ಫೂರ್ತಿ ನೀಡುವ ಮೂರು ಘಟನೆಗಳು!
ಆರನೇ ಯತ್ನದಲ್ಲಿ ಜ್ಯೋತಿಗೆ ಯಶಸ್ಸು
ಹೇಮಚಂದ್ ಅವರಿಗೆ ತಮ್ಮ ಮಕ್ಕಳಾದರೂ ಒಳ್ಳೆಯ ಜೀವನ ಸಾಗಿಸಲಿ ಎಂಬ ಕನಸಿತ್ತು. ಹಾಗಾಗಿ, ಮಗ ಹಾಗೂ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರು. ಬಡತನದಲ್ಲಿಯೂ ಅವರು ಶಿಕ್ಷಣಕ್ಕೆ ಆದ್ಯತೆ ನೀಡಿದರು. ಅದರಂತೆ, ಕಾನೂನು ಪದವಿ ಪೂರೈಸಿದ ಜ್ಯೋತಿ, ಯುಪಿಪಿಎಸ್‌ಸಿ ಪರೀಕ್ಷೆಯ ತಯಾರಿಗಾಗಿ ಲಖನೌಗೆ ತೆರಳಿದರು. ಹಣಕಾಸು ತೊಂದರೆ, ಆರೋಗ್ಯದ ಸಮಸ್ಯೆಯ ಮಧ್ಯೆಯೂ ಓದಿದ ಜ್ಯೋತಿ, ಆರನೇ ಪ್ರಯತ್ನದಲ್ಲಿ ಯುಪಿಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ತಂದೆಯ ಕನಸನ್ನು ನನಸು ಮಾಡಿದ್ದಾರೆ.
ಒಟ್ಟಿನಲ್ಲಿ ಕಡಿಮೆ ಅಂಕ ಸಿಕ್ಕಿತು ಎಂದು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಕೈ ಹಾಕುವ ಬದಲು, ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಿಗಲಿಲ್ಲ ಎಂದು ಚಿಂತೆ ಮಾಡುತ್ತ ಕೂರುವ ಬದಲು, ನೆಪಗಳನ್ನು ಹೇಳುತ್ತ ಕಾಲ ದೂಡುವ ಬದಲು, ಸತತ ಓದು, ಇನ್ನಿಲ್ಲದ ಪ್ರಯತ್ನದ ಮೂಲಕ ಯಶಸ್ಸು ಗಳಿಸಬಹುದು ಎಂಬುದಕ್ಕೆ ಜ್ಯೋತಿ ಚೌರಾಸಿಯಾ ಅವರೇ ಉತ್ತಮ ನಿದರ್ಶನ ಆಗಿದ್ದಾರೆ.