ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಗೌರವವಾದ “ಪದ್ಮ” ಪ್ರಶಸ್ತಿಗಳಿಗೆ (Padma Awards) ಆನ್‌ಲೈನ್ ಮೂಲಕ ನಾಮನಿರ್ದೇಶನ ಮಾಡಲು ಕೇಂದ್ರ ಸರಕಾರವು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (https://awards.gov.in) ಮೂಲಕ ಸೆಪ್ಟೆಂಬರ್ ೧೫ರೊಳಗೆ ನಾಮನಿರ್ದೇಶನ ಅಥವಾ ಶಿಫಾರಸು ಮಾಡಬಹುದಾಗಿದೆ. 2023ರ ಗಣರಾಜ್ಯೋತ್ಸವದ ವೇಳೆ ಪದ್ಮ ಪ್ರಶಸ್ತಿ ಘೋಷಿಸಲಾಗುತ್ತದೆ.
ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪದ್ಮ ಪ್ರಶಸ್ತಿ ನೀಡಲಾಗುತ್ತದೆ. ಹಾಗಾಗಿ, ಜನರು ತಮ್ಮ ಸುತ್ತಲೂ ಇರುವ ಎಲೆಮರೆಯ ಸಾಧಕರನ್ನು ಗುರುತಿಸಿ, ಅವರನ್ನು ಅತ್ಯುನ್ನತ ಗೌರವಗಳಿಗೆ ನಾಮಿನೇಟ್ ಮಾಡಬಹುದಾಗಿದೆ.
ನಾಮಿನೇಟ್ ಮಾಡುವುದು ಹೇಗೆ?
ತೆರೆಮರೆಯ ಸಾಧಕರನ್ನು ನಾಮನಿರ್ದೇಶನ ಮಾಡುವವರು ಪೋರ್ಟಲ್‌ನಲ್ಲಿ ಕೆಲವು ಸುಲಭ ಪ್ರಕ್ರಿಯೆ ಮುಗಿಸಬೇಕು. ನಾಮನಿರ್ದೇಶನಗಳು ಪೋರ್ಟಲ್‌ನಲ್ಲಿ ಲಭ್ಯವಿರುವ ನಮೂನೆಯಲ್ಲಿ ನೀಡಿದ ಎಲ್ಲ ಸಂಬಂಧಿತ ವಿವರ ನೀಡಬೇಕು. ಸಾಧಕರ ಕುರಿತು 800 ಪದಗಳ ಮಿತಿಯಲ್ಲಿ ಮಾಹಿತಿ ಒದಗಿಸಬೇಕು. ಆಯಾ ಕ್ಷೇತ್ರದಲ್ಲಿ ವ್ಯಕ್ತಿಗಳು ಮಾಡಿದ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಬೇಕು. ಕೇಂದ್ರ ಸರಕಾರವು ಪದ್ಮ ಪ್ರಶಸ್ತಿಗಳನ್ನು “ಸಾರ್ವಜನಿಕರ ಪ್ರಶಸ್ತಿ”ಗಳನ್ನಾಗಿ ಮಾರ್ಪಡಿಸಲು ಉತ್ತೇಜಿಸುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವಾರು ತೆರೆಮರೆಯ ಸಾಧಕರಿಗೆ ಪದ್ಮ ಗೌರವ ಸಂದಿವೆ.
ಇದನ್ನೂ ಓದಿ | 2007ರಲ್ಲಿ ತೀಸ್ತಾ ಸೆಟಲ್ವಾಡ್‌ಗೆ ಪದ್ಮ ಪುರಸ್ಕಾರ ದೊರೆತಿದ್ದು ಹೇಗೆ? ಯಾಕೆ?; ಎಸ್‌ಐಟಿ ವರದಿ ಇದು !