ಬೆಂಗಳೂರು: ಈ ಬಾರಿಯ ಪದ್ಮ ಪ್ರಶಸ್ತಿ (Padma award)ಗಳನ್ನು ಘೋಷಿಸಲಾಗಿದೆ. ಈ ಪೈಕಿ ಗಡಿನಾಡು ಕಾಸರಗೋಡಿನ ರೈತ, ದೇಸಿ ಭತ್ತದ ತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿ (Sathyanarayana Beleri) ಅವರಿಗೆ ಪದ್ಮಶ್ರೀ (Padma Shri) ಗೌರವ ಲಭಿಸಿದೆ. ಪ್ರಸ್ತುತ ಅವರು ಸುಮಾರು 650ಕ್ಕೂ ಹೆಚ್ಚಿನ ಭತ್ತದ ತಳಿಗಳ ಸಂರಕ್ಷಣೆ ಮಾಡುತ್ತಿದ್ದಾರೆ. 50 ವರ್ಷ ವಯಸ್ಸಿನ ಸತ್ಯನಾರಾಯಣ ಅವರ ಅಪರೂಪದ ಈ ಮಹತ್ಕಾರ್ಯದ ಬಗ್ಗೆ ಇಲ್ಲಿದೆ ಮಾಹಿತಿ.
ಹಿನ್ನೆಲೆ
ಸತ್ಯನಾರಾಯಣ ಅವರು ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತ್‌ನ ನೆಟ್ಟಿಣಿಗೆ ಗ್ರಾಮದವರು. ಸಾಧಾರಣ ಕೃಷಿ ಕುಟುಂಬ ಹಿನ್ನೆಲೆಯ ಅವರು ಇದೀಗ ಅಸಾಧಾರಣ ಕೃಷಿ ಕಾರ್ಯದ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಸುಮಾರು 12 ವರ್ಷಗಳಿಂದ ದೇಸಿ ಭತ್ತದ ತಳಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ.
ಆರಂಭವಾಗಿದ್ದು ಹೇಗೆ?
ಹಿರಿಯ ಗಾಂಧಿವಾದಿ ಚೇರ್ಕಾಡಿ ರಾಮಚಂದ್ರರಾಯ ಅವರು ನೀಡಿದ ಒಂದು ಮುಷ್ಟಿಯಷ್ಟು ರಾಜಕಯಮೆ ಎಂಬ ದೇಸಿ ಭತ್ತದ ತಳಿ ಸತ್ಯನಾರಾಯಣ ಅವರ ಜೀವನವನ್ನೇ ಬದಲಾಯಿಸಿತು. ಅಲ್ಲಿಂದ ಆರಂಭವಾದ ಅವರ ಕಾರ್ಯ ಸದ್ಯ ಸುಮಾರು 650ಕ್ಕೂ ಹೆಚ್ಚಿನ ತಳಿಯವರೆಗೆ ಬಂದಿದೆ.
ಯಾವೆಲ್ಲ ತಳಿ?
ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ, ರಾಜಭೋಗ, ಉಪ್ಪು ನೀರಿನಲ್ಲಿಯೂ ಬೆಳೆಯಬಹುದಾದ ಕಗ್ಗ, ಬರ ನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಟಾ, ಫಿಲಿಪೈನ್ಸ್‌ನ ಮನಿಲಾ, ಸುಶ್ರುತ ಕಾಲದ ಕಳಮೆ, ಬುದ್ಧನ ಕಾಲಘಟ್ಟದ ಕಲಾನಾಮಕ್, ನೇರಳೆ ಬಣ್ಣದ ಡಾಂಬಾರ್ ಕಾಳಿ, ಕಾರ್ ರೆಡ್ ರೈಸ್, ಕಲಾವತಿ, ನಜರ್ ಬಾತ್, ಮೈಸೂರು ಮಲ್ಲಿಗೆ, ಜಾಸ್ಮಿನ್ ಮುಂತಾದ ಅಮೂಲ್ಯ ತಳಿಗಳನ್ನು ಸತ್ಯನಾರಾಯಣ ಸಂರಕ್ಷಿಸುತ್ತಿದ್ದಾರೆ. ಜತೆಗೆ ಕರ್ನಾಟಕ, ಮಣಿಪುರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಮುಂತಾದೆಡೆಗಳ ಭತ್ತದ ತಳಿಯೂ ಇವರ ಸಂಗ್ರಹದಲ್ಲಿದೆ.
ಸತ್ಯನಾರಾಯಣ ಅವರಿಗೆ 5 ಎಕ್ರೆ ಜಮೀನಿದೆ. ಈ ಪೈಕಿ 4 ಎಕ್ರೆಯಲ್ಲಿ ರಬ್ಬರ್ ಪ್ಲಾಂಟೇಷನ್ ಇದೆ. ಉಳಿದ ಜಮೀನಿನಲ್ಲಿ ಸ್ವಲ್ಪ ಅಡಿಕೆ, ತೆಂಗಿನ ಮರಗಳಿವೆ. ಇರುವ ಅಲ್ಪ-ಸ್ವಲ್ಪ ಜಾಗದಲ್ಲಿ ಅವರು ಭತ್ತದ ತಳಿ ಸಂರಕ್ಷಣೆ ಮಾಡುತ್ತಿದ್ದಾರೆ. ಎಲ್ಲ ತಳಿಗಳು ಹೆಚ್ಚೆಂದರೆ 6-8 ತಿಂಗಳ ಕಾಲ ಬಾಳ್ವಿಕೆ ಬರುತ್ತವೆ. ಹೀಗಾಗಿ ವರ್ಷಕ್ಕೊಮ್ಮೆಯಾದರೂ ಇವುಗಳನ್ನು ಬಿತ್ತಿ ಹೊಸ ಬೀಜಗಳನ್ನು ಸತ್ಯನಾರಾಯಣ ಸಂಗ್ರಹಿಸುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗಮನಿಸಿ ಸರ್ಕಾರಗಳು ಈಗಾಗಲೇ ಹಲವು ಪ್ರಶಸ್ತಿ ನೀಡಿವೆ.
ಇದನ್ನೂ ಓದಿ: Parbati Baruah: ಆನೆಗಳ ಒಡನಾಡಿಯನ್ನು ಅರಸಿ ಬಂತು ಪದ್ಮಶ್ರೀ ಪ್ರಶಸ್ತಿ; ಇಲ್ಲಿದೆ ಮೊದಲ ಮಹಿಳಾ ಮಾವುತರ ಸಾಹಸಗಾಥೆ
ಬಹುಮುಖ ಪ್ರತಿಭೆ
ಸತ್ಯನಾರಾಯಣ ಅವರು ಭತ್ತದ ತಳಿಯ ಸಂರಕ್ಷಕ ಮಾತ್ರವಲ್ಲ ಜೇನು ಕೃಷಿಕರೂ ಹೌದು. ಮನೆಯ ಸುತ್ತ ಮುತ್ತ ಜೇನು ಪಟ್ಟಿಗೆ ಇಟ್ಟು ಜೇನು ಸಂಗ್ರಹಿಸುತ್ತಾರೆ. ಜತೆಗೆ ಗಿಡಗಳಿಗೆ ಕಸಿಯನ್ನೂ ಕಟ್ಟುತ್ತಾರೆ. ಗಾರೆ ಕೆಲಸ, ಮರದ ಕೆಲಸಗಳಲ್ಲಿ ಪರಿಣಿತರಾದ ಇವರು ಸಾಹಿತ್ಯ ಕೃಷಿಯನ್ನೂ ಮಾಡಿದ್ದಾರೆ. ಇವರು ಬರೆದ ಲೇಖನ, ಕವಿತೆ, ವ್ಯಂಗ್ಯ ಚಿತ್ರಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ