Site icon Vistara News

ಚುನಾವಣೆ ಮೊದಲೇ ಕಾಂಗ್ರೆಸ್‌ಗೆ ಶಾಕ್;‌ ಬಿಜೆಪಿ ಸೇರಿದ ಮಾಜಿ ಸಿಎಂ ಕರುಣಾಕರನ್‌ ಪುತ್ರಿ

Padmaja Venugopal

Padmaja Venugopal, daughter of ex-Kerala Chief Minister, joins BJP

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ದಿನಾಂಕ ಘೋಷಣೆಗೆ ಚುನಾವಣೆ ಆಯೋಗವು ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ರಾಜಕೀಯ ಪಕ್ಷಗಳೂ ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಚುನಾವಣೆ ಸ್ಪರ್ಧೆಗಾಗಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಲಾಬಿ ಕೂಡ ಶುರುವಾಗಿವೆ. ಬಿಜೆಪಿಯು ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಚುನಾವಣೆ ಚಟುವಟಿಕೆಗಳು ಜೋರಾಗುತ್ತಿರುವ ಮಧ್ಯೆಯೇ ಕೇರಳ ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್‌ (K Karunakaran) ಅವರ ಪುತ್ರಿ ಪದ್ಮಜಾ ವೇಣುಗೋಪಾಲ್‌ (Padmaja Venugopal) ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ನಾಯಕ ಪ್ರಕಾಶ್‌ ಜಾವ್ಡೇಕರ್‌ ಅವರು ಪದ್ಮಜಾ ವೇಣುಗೋಪಾಲ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇದಾದ ಬಳಿಕ ಪದ್ಮಜಾ ವೇಣುಗೋಪಾಲ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೇರಳ ಪ್ರದೇಶ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ಪದ್ಮಜಾ ವೇಣುಗೋಪಾಲ್‌ ಅವರು ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ನಾಯಕತ್ವ ಕುರಿತು ಬೇಸರ


ಬಿಜೆಪಿ ಸೇರಿದ ಬಳಿಕ ಮಾತನಾಡಿದ ಪದ್ಮಜಾ ವೇಣುಗೋಪಾಲ್‌ ಅವರು ಕಾಂಗ್ರೆಸ್‌ ನಾಯಕತ್ವದ ಕುರಿತು ಬೇಸರ ವ್ಯಕ್ತಪಡಿಸಿದರು. “ಕಾಂಗ್ರೆಸ್‌ ನಾಯಕತ್ವದ ಬಗ್ಗೆ ನನಗೆ ಹಲವು ದಿನಗಳಿಂದಲೂ ಅಸಮಾಧಾನವಿತ್ತು. ಇದರ ಕುರಿತು ಹೈಕಮಾಂಡ್‌ಗೂ ಕೆಲವು ಬಾರಿ ದೂರು ನೀಡಿದ್ದೆ. ಆದರೆ, ಹೈಕಮಾಂಡ್‌ನಿಂದ ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದಾಗಿ ನನಗೆ ತುಂಬ ಬೇಸರವಾಯಿತು. ನನ್ನ ತಂದೆಯೂ ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಇದೇ ಅಭಿಪ್ರಾಯ ಹೊಂದಿದ್ದರು. ಕೊನೆಗೆ ನಾನು ಬಿಜೆಪಿ ಸೇರ್ಪಡೆಯಾಗುವ ತೀರ್ಮಾನ ಮಾಡಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Geeta Koda: ಏಕೈಕ ಸಂಸದೆಯೂ ಬಿಜೆಪಿ ಸೇರ್ಪಡೆ; ಈ ರಾಜ್ಯದಲ್ಲಿ ಶೂನ್ಯಕ್ಕಿಳಿದ ಕಾಂಗ್ರೆಸ್!‌

ಯಾರಿವರು ಪದ್ಮಜಾ ವೇಣುಗೋಪಾಲ್?‌

ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ಕೆ. ಕರುಣಾಕರನ್‌ ಅವರ ಪುತ್ರಿಯಾಗಿರುವ 64 ವರ್ಷದ ಪದ್ಮಜಾ ವೇಣುಗೋಪಾಲ್‌ ಅವರು ಬಿಜೆಪಿ ಸೇರುವ ಮೊದಲು ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತ್ರಿಶ್ಶೂರ್‌ ವಿಧಾನಸಭೆ ಕ್ಷೇತ್ರದಿಂದ ಕಳೆದ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.

2004ರಲ್ಲಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ ಹಿನ್ನಡೆ ಅನುಭವಿಸಿದ್ದರು. ಈಗ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇವರ ಸಹೋದರ ಕೆ. ಮುರಳೀಧರನ್‌ ಅವರು ಕಾಂಗ್ರೆಸ್‌ ಸಂಸದರಾಗಿದ್ದು, ಸಹೋದರಿಯ ತೀರ್ಮಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೇರಳ ಬಿಜೆಪಿ ನಾಯಕರು ಪದ್ಮಜಾ ವೇಣುಗೋಪಾಲ್‌ ಅವರನ್ನು ಸ್ವಾಗತಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version