ನವ ದೆಹಲಿ: ರಾಜಸ್ಥಾನದ ಅನೂಪ್ ವಲಯದಲ್ಲಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ರೇಂಜರ್ಗಳ ನಡುವೆ ಶುಕ್ರವಾರ ಸಂಜೆ ಗುಂಡಿನ ಚಕಮಕಿ ನಡೆದಿದ್ದಾಗಿ ವರದಿಯಾಗಿದೆ. ಈ ಗುಂಡಿನ ಸಂಘರ್ಷದಲ್ಲಿ ಭಾರತೀಯ ಸೇನೆಯಲ್ಲಿ ಯಾರ ಪ್ರಾಣವೂ ಹೋಗಿಲ್ಲ, ಯಾರೂ ಗಾಯಗೊಂಡಿಲ್ಲ ಎಂದೂ ಹೇಳಲಾಗಿದೆ. ‘ಪಾಕಿಸ್ತಾನಿ ರೇಂಜರ್ಗಳೇ ಮೊದಲು ಗುಂಡಿನ ದಾಳಿ ನಡೆಸಿದರು. ನಾವಿದನ್ನು ಇಲ್ಲಿಗೇ ಬಿಡುವುದಿಲ್ಲ. ಬಲವಾಗಿ ಪ್ರತಿಭಟಿಸುತ್ತೇವೆ. ಭಾರತ-ಪಾಕ್ ಸ್ಥಳೀಯ ಬ್ರಿಗೇಡಿಯರ್ ಮಟ್ಟದ ಸಭೆ ನಡೆಸಲು ಆಗ್ರಹಿಸುತ್ತೇವೆ‘ ಎಂದು ಬಿಎಸ್ಎಫ್ ವಕ್ತಾರ ತಿಳಿಸಿದ್ದಾರೆ.
ಅನೂಪ್ವಲಯದ ಗಡಿ ಬೇಲಿ ಬಳಿ ಶುಕ್ರವಾರ ಮಧ್ಯಾಹ್ನ 2ಗಂಟೆ ಹೊತ್ತಿಗೆ ರೈತರ ಗುಂಪೊಂದು ಕೆಲಸ ಮಾಡುತ್ತಿತ್ತು. ಅಲ್ಲೇ ಸಮೀಪದಲ್ಲಿ ಬಿಎಸ್ಎಫ್ನ ಕಿಸಾನ್ ಗಾರ್ಡ್ ವಿಭಾಗದ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಅದೇ ವೇಳೆ ಪಾಕಿಸ್ತಾನಿ ರೇಂಜರ್ಗಳು ಆರೇಳು ಸುತ್ತು ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಗಡಿಭದ್ರತಾ ಪಡೆ ಸಿಬ್ಬಂದಿ 18 ಸುತ್ತು ಗುಂಡು ಹಾರಿಸಿ, ಪಾಕ್ ರೇಂಜರ್ಸ್ನ್ನು ಹಿಮ್ಮೆಟ್ಟಿಸಿದ್ದಾರೆ ಎಂದೂ ಭಾರತೀಯ ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ. ಹಾಗೇ, ರೈತರಿಗೂ ಯಾವುದೇ ತೊಂದರೆಯಾಗಿಲ್ಲ ಎಂದೂ ತಿಳಿಸಿದ್ದಾರೆ.
ಭಾರತ-ಪಾಕ್ ಎಲ್ಒಸಿ ಮತ್ತು ಎಲ್ಲ ಅಂತಾರಾಷ್ಟ್ರೀಯ ಗಡಿ ಭಾಗಗಳಲ್ಲೂ ಕದನ ವಿರಾಮ ಒಪ್ಪಂದವನ್ನು ಎರಡೂ ರಾಷ್ಟ್ರಗಳೂ ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಕಳೆದ ವರ್ಷ ಮಾತುಕತೆಯಾಗಿದೆ. 2019ರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘಿಸುತ್ತಿತ್ತು. 2020ರಲ್ಲಿ ಕಾಶ್ಮೀರದ ಎಲ್ಒಸಿ ಸೇರಿ ಎಲ್ಲ ಗಡಿಭಾಗಗಳೂ ಸೇರಿ ಒಟ್ಟು 4600 ಬಾರಿ ಯುದ್ಧ ವಿರಾಮ ಉಲ್ಲಂಘನೆ ಮಾಡಿತ್ತು. ಅದರ ಬೆನ್ನಲ್ಲೇ, 2021ರಲ್ಲಿ ಭಾರತ-ಪಾಕ್ ಸೇನೆಗಳು ಬ್ರಿಗೇಡಿಯರ್ ಮಟ್ಟದ ಸಭೆ ನಡೆಸಿ, 2003ರ ಕದನವಿರಾಮ ಒಪ್ಪಂದ ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಎರಡೂ ರಾಷ್ಟ್ರಗಳೂ ಒಪ್ಪಿಕೊಂಡಿದ್ದವು. ಆದರೆ ಈಗ ರಾಜಸ್ಥಾನದಲ್ಲಿ ಪಾಕ್ ನಿಯಮ ಉಲ್ಲಂಘಿಸಿದೆ. ಅಂದಹಾಗೇ, ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಹೀಗೆ ಗುಂಡಿನ ಚಕಮಕಿ ಆಗುವುದು ತೀರ ವಿರಳವಾಗಿದೆ.
ಇದನ್ನೂ ಓದಿ: World Cup | ಪಾಕಿಸ್ತಾನ ತಂಡಕ್ಕೆ ವೀಸಾ ನಿರಾಕರಿಸಿದ ಭಾರತದ ವಿದೇಶಾಂಗ ಸಚಿವಾಲಯ!