Site icon Vistara News

ಜಮ್ಮು ಕಾಶ್ಮೀರದಲ್ಲಿ ಜಿ20 ಸಭೆ ತಪ್ಪಿಸಲು ಪಾಕಿಸ್ತಾನದ ಸಂಚು; ದೊಡ್ಡ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ

Pakistan big conspiracy to disrupt G20 meets Says Source

#image_title

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮೇ 22-24ರವರೆಗೆ ಜಿ 20 ಶೃಂಗ (G 20 Summit)ದ ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆ ನಡೆಯಲಿದೆ (G20 meets in Kashmir). ಈ ವರ್ಷದ ಜಿ20 ಶೃಂಗಸಭೆಯ ಆತಿಥ್ಯ ವಹಿಸಿರುವ ಭಾರತ ಅದರ ಪೂರ್ವಭಾವಿ ಸಭೆಯನ್ನು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಿದೆ. ಈ ಒಕ್ಕೂಟದಲ್ಲಿರುವ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುಕೆ ಮತ್ತು ಯುಎಸ್​ನ ಪ್ರತಿನಿಧಿಗಳು ಈ ಎಲ್ಲ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ.

ಆದರೆ ಶ್ರೀನಗರದಲ್ಲಿ ನಡೆಯಲಿರುವ ಸಭೆಯನ್ನು ತಡೆಯಲು, ಜಿ 20 ಸಭೆಯಲ್ಲಿ ಇತರ ದೇಶಗಳ ಪ್ರತಿನಿಧಿಗಳು ಭಾಗವಹಿಸುವುದನ್ನು ತಪ್ಪಿಸಬೇಕು ಎಂದು ಲಷ್ಕರೆ ತೊಯ್ಬಾ, ಜೈಷೆ ಮೊಹಮ್ಮದ್​, ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಗಳು ಪ್ಲ್ಯಾನ್​ ರೂಪಿಸಿದ್ದವು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಜಿ20 ಸಭೆ ನಡೆಯುವುದಕ್ಕೂ ಪೂರ್ವ ಅಂದರೆ, ಮೇ 15-20ರವರೆಗೆ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿವೆ. ಈ ಸಂಬಂಧ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಭಯೋತ್ಪಾದಕರೆಲ್ಲ ಸೇರಿ ಸಭೆ ಕೂಡ ನಡೆಸಿದ್ದಾರೆ. ಹಾಗೇ, ತಮ್ಮ ಪ್ಲ್ಯಾನ್​ನ್ನು ಅನುಷ್ಠಾನಕ್ಕೆ ತರಲು ಉಗ್ರರು ರಾಜೌರಿಯ ದಕ್ಷಿಣ ಪಿರ್ ಪಂಜಾಲ್​ ಪ್ರದೇಶದಲ್ಲಿ ಒಳನುಸುಳಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಿಂತಿದ್ದು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ ಎಂದು ವರದಿಯಾಗಿದೆ.

ಇದನ್ನೂ ಓದಿ: ಮುಂಬಯಿಗೆ ಬಂದಿದ್ದಾರಂತೆ ಮೂವರು ಭಯೋತ್ಪಾದಕರು; ಹುಸಿಯೋ, ನಿಜವೋ?-ತನಿಖೆ ಶುರು ಮಾಡಿದ ಪೊಲೀಸ್​

ಸೇನಾ ಸಿಬ್ಬಂದಿಯ ವಾಹನಗಳ ಮೇಲೆ ದಾಳಿ ನಡೆಸುವುದು ಕೂಡ ಇದೇ ರಾವಲ್ಪಿಂಡಿಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರ ಎಂದು ಹೇಳಲಾಗಿದೆ. ಅಂದಹಾಗೇ, ಜಿ 20 ಒಕ್ಕೂಟದ ಪ್ರಮುಖ ಶೃಂಗಸಭೆ ದೆಹಲಿಯಲ್ಲಿ ನಡೆಯಲಿದ್ದು, ಅದಕ್ಕೂ ಬೆದರಿಕೆಯೊಡ್ಡಲು ಭಯೋತ್ಪಾದಕರು ನಿರ್ಧಾರ ಮಾಡಿದ್ದಾರೆ. ದೆಹಲಿಯಲ್ಲೂ ದಾಳಿಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಬನಿಹಾಲ್‌ನಿಂದ ಕಾಜಿಕುಂಡ್​​ ಕಡೆಗೆ ಹೋಗುತ್ತಿದ್ದ ಸೇನಾ ವಾಹನದ ಮೇಲೆ ಫಾರೂಕ್​ ಅಹ್ಮದ್ ಭಟ್​ ಮತ್ತು ಇತರ ಇಬ್ಬರು ಪಾಕಿಸ್ತಾನದ ಭಯೋತ್ಪಾದಕರು ಸೇರಿ ದಾಳಿ ಮಾಡಲು ಯೋಜನೆ ಹಾಕಿಕೊಂಡಿದ್ದರು. ಇದಕ್ಕಾಗಿ ಸ್ಥಳೀಯ ಭಯೋತ್ಪಾದಕರ ಸಹಾಯವನ್ನೂ ಪಡೆದಿದ್ದರು. ಆದರೆ ಭದ್ರತಾ ಪಡೆಗಳು ಈ ದಾಳಿಯನ್ನು ವಿಫಲಗೊಳಿಸಿವೆ. ಹಾಗೇ, ಸಹಾಯಕ್ಕೆ ನಿಂತ ಸ್ಥಳೀಯ ಭಯೋತ್ಪಾದಕರ ಬಂಧನ/ಹತ್ಯೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಭಯೋತ್ಪಾದಕರು ಜಿ 20 ಸಭೆಯನ್ನು ತಡೆಯಲು ಈ ಸಲ ಅತ್ಯಂತ ಆಳವಾಗಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದರು. ಇದು ಪಾಕಿಸ್ತಾನದ ಐಎಸ್​ಐನ ಪ್ಲ್ಯಾನ್​. ಜಿ20 ಸಭೆ ಸಂಬಂಧ ಕರ್ತವ್ಯದಲ್ಲಿರುವ ಸರ್ಕಾರಿ ಉದ್ಯೋಗಿಗಳು, ಯೋಧರ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಟಾಸ್ಕ್​ನ್ನು ಪಾಕಿಸ್ತಾನ ಲಷ್ಕರೆ ತೊಯ್ಬಾ ಮತ್ತು ಅದರ ಸಹಸಂಘಟನೆ ಟಿಆರ್​​ಎಫ್​​ಗೆ ನೀಡಿತ್ತು. ಕಾಶ್ಮೀರ ಕಣಿವೆಯ ದೊಡ್ಡ ಶಾಲೆಗಳ ಮೇಲೆ, ಸ್ಥಳೀಯರಲ್ಲದವರು ವಾಸವಾಗಿರುವ ಪ್ರದೇಶಗಳ ಮೇಲೆ ದಾಳಿ ಮಾಡುವಂತೆ ಪಾಕಿಸ್ತಾನ ಭಯೋತ್ಪಾದಕರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಆದರೆ ಪಾಕಿಸ್ತಾನದ ಎಲ್ಲ ಸಂಚನ್ನೂ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಸದ್ಯ ಜಿ 20ಗೆ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ.

Exit mobile version