ಪಾಕಿಸ್ತಾನದಲ್ಲಿ ಅಲ್ಲಿನ ಪ್ರಧಾನಿಯಿಂದ ಹಿಡಿದು, ಒಬ್ಬಲ್ಲ ಒಬ್ಬ ಸಚಿವ, ಒಂದಲ್ಲ ಒಂದು ಕಾರಣಕ್ಕೆ ಟೀಕೆಗೆ, ಟ್ರೋಲ್ಗೆ ಗುರಿಯಾಗುತ್ತಿರುತ್ತಾರೆ. ಈಗ ಈ ಸಾಲಿಗೆ ಸೇರಿದವರು ಪಾಕಿಸ್ತಾನ ಶಿಕ್ಷಣ ಸಚಿವ ರಾಣಾ ತನ್ವೀರ್ ಹುಸೇನ್. ಲಾಹೋರ್ನಲ್ಲಿರುವ ಸರ್ಕಾರಿ ಕಾಲೇಜು ಯೂನಿವರ್ಸಿಟಿ (GCU)ಯ ಘಟಿಕೋತ್ಸವದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಸಚಿವರು ಅತ್ಯಂತ ಅಸಭ್ಯ-ಅಶ್ಲೀಲ ಪದ ಬಳಸಿ ಟೀಕೆಗೆ ಗುರಿಯಾಗಿದ್ದಾರೆ.
ಸಚಿವ ಹುಸೇನ್ ಅವರು ಭಾಷಣ ಮಾಡುತ್ತ, ‘ನಾನು ಹಿಂದೊಮ್ಮೆ ಫೈಸಲಾಬಾದ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ರಾಣಾ ಇಕ್ರಾರ್ ಅವರನ್ನು ಭೇಟಿಯಾಗಿದ್ದೆ. ಅವರ ಬಳಿ ಮಾತನಾಡುತ್ತ, ‘ರಾಣಾ ಬುಡಕಟ್ಟು ಜನಾಂಗದವರನ್ನು ಆಡಳಿತಗಾರರು ಎಂದೇ ಹೇಳಲಾಗುತ್ತದೆ. ಅಂಥದ್ದರಲ್ಲಿ ನೀವು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ಅವರಿಗೆ ಹೇಳಿದೆ’ ಎಂದು ಹೇಳಿದರು. ಇದೇ ವೇಳೆ ಅವರು ಒಂದು ಅಸಭ್ಯ ಶಬ್ದ (F******) ಬಳಕೆ ಮಾಡಿದ್ದಾರೆ. ಅವರ ಸಂಪೂರ್ಣ ಭಾಷಣ ಲಭ್ಯವಾಗಿಲ್ಲ. ಆದರೆ ಅದೊಂದು ಅಶ್ಲೀಲ ಪದ ಹೇಳಿದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದವರೇ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಿಂತು ಇಂಥ ಮಾತಾಡುತ್ತಾರಾ? ವಿದ್ಯಾರ್ಥಿಗಳನ್ನು ಶಿಕ್ಷಣವಂತರ ಜತೆ, ಸಂಸ್ಕಾರವಂತರನ್ನಾಗಿ ಮಾಡಬೇಕಾದ ಹೊಣೆ ಇರುವವರು ಅವರ ಎದುರು ಅಶ್ಲೀಲ ಪದ ಪ್ರಯೋಗ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಕೆಲವರಂತೂ ನೀವು ರಾಜೀನಾಮೆ ಕೊಡಬೇಕು ಎಂದು ಸಚಿವರನ್ನು ಆಗ್ರಹಿಸುತ್ತಿದ್ದಾರೆ.
ಕ್ಷಮೆ ಕೇಳಿದ ಶಿಕ್ಷಣ ಸಚಿವ
ಯಾವಾಗ ತಾವಾಡಿದ ಮಾತುಗಳು ವಿವಾದ ಸೃಷ್ಟಿಸುತ್ತಿವೆ ಎಂಬುದು ಗೊತ್ತಾಯಿತೋ, ಆಗ ಶಿಕ್ಷಣ ಸಚಿವ ರಾಣಾ ತನ್ವೀರ್ ಹುಸೇನ್ ಕ್ಷಮೆ ಕೇಳಿದ್ದಾರೆ. ಯೂನಿವರ್ಸಿಟಿಯಲ್ಲಿ ಭಾಷಣ ಮಾಡುವಾಗ, ಬಾಯ್ತಪ್ಪಿನಿಂದ ಹಾಗೆ ಮಾತನಾಡಿದೆ. ಈ ಬಗ್ಗೆ ನನಗೆ ವಿಷಾದವಿದೆ. ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಅಷ್ಟಾದರೂ ನೆಟ್ಟಿಗರು ಸಚಿವರನ್ನು ಟೀಕಿಸುವುದನ್ನು ಬಿಟ್ಟಿಲ್ಲ. ಪಾಕಿಸ್ತಾನದಲ್ಲಿ ಸಂಪೂರ್ಣ ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಯಾವ ಇಲಾಖೆಯೂ ಸರಿಯಾಗಿಲ್ಲ ಎಂದಿದ್ದಾರೆ.