ನವ ದೆಹಲಿ: ಉಗ್ರಪೋಷಣೆ, ಕುತಂತ್ರ ಬಿಟ್ಟು ಇನ್ನೇನೂ ಸಾಧಿಸಲು ಲಾಯಕ್ಕಿಲ್ಲದ ನೆರೆದೇಶ ಪಾಕಿಸ್ತಾನ ಭಾರತದ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿದೆ. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತ ನರೇಂದ್ರ ಮೋದಿಯನ್ನು ಗುಜರಾತ್ ಕಟುಕ ಎಂದು ಹೀಗಳೆದು ಆಕ್ರೋಶಕ್ಕೆ ಕಾರಣರಾದ ಬೆನ್ನಲ್ಲೇ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕಿ, ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಸುರಕ್ಷತಾ ಇಲಾಖೆ ಸಚಿವೆ ಶಾಜಿಯಾ ಮಾರಿ ಭಾರತಕ್ಕೆ ಅಣ್ವಸ್ತ್ರ ದಾಳಿ ಬೆದರಿಕೆ ಹಾಕಿದ್ದಾರೆ.
ಭುಟ್ಟೋ ಪರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಜಿಯಾ, ‘ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಬಳಿ ಅಣ್ವಸ್ತ್ರ ಇಟ್ಟುಕೊಂಡಿರುವುದು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಅಲ್ಲ. ಅಂಥ ಸಂದರ್ಭ ಬಂದಿದ್ದೇ ಆದರೆ ನಾವದನ್ನು ಪ್ರಯೋಗಿಸಲು ಹಿಂದೇಟು ಹಾಕುವುದಿಲ್ಲ. ಮೋದಿ ಸರ್ಕಾರ ನಮ್ಮ ವಿರುದ್ಧ ಹೋರಾಟಕ್ಕೆ ಇಳಿದರೆ, ನಾವೂ ಪ್ರತಿದಾಳಿಗೆ ಸಿದ್ಧ. ಭಾರತ ಪದೇಪದೆ ನಮ್ಮ ತಂಟೆಗೆ ಬಂದರೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ’ ಎಂದಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಸುದ್ದಿಗೋಷ್ಠಿಯಲ್ಲಿ ಮೋದಿ ಮತ್ತು ಆರ್ ಎಸ್ ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಭುಟ್ಟೋ ವಿರುದ್ಧ ಭಾರತದಲ್ಲಿ ಬಿಜೆಪಿಗರು, ಜನಸಾಮಾನ್ಯರು ಕೆಂಡವಾದ ಬೆನ್ನಲ್ಲೇ ಶಾಜಿಯಾ ಇಂಥದ್ದೊಂದು ಅವಿವೇಕತನದ ಹೇಳಿಕೆ ನೀಡಿ ಮತ್ತೆ ಪ್ರಚೋದನೆ ನೀಡಿದ್ದಾರೆ.
ಇದನ್ನೂ ಓದಿ: Ranbir Kapoor | ಪಾಕಿಸ್ತಾನದ ಚಿತ್ರದಲ್ಲಿ ನಟಿಸುತ್ತೇನೆ ಎಂದ ರಣಬೀರ್ ಕಪೂರ್: ಟ್ರೋಲ್‌ಗೆ ಗುರಿಯಾದ ನಟ!