Site icon Vistara News

Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Amit Shah

Amit Shah directs to implement area domination, zero terror plans in Jammu Kashmir after terrorist attacks

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (PoK) ಜನ ದಂಗೆ ಎದ್ದಿದ್ದಾರೆ. ಪಾಕಿಸ್ತಾನ ಸರ್ಕಾರದ ವಿರುದ್ಧವೇ ಜನ ಸಮರ ಸಾರಿದ್ದು, ಭಾರತದ ಜತೆ ವಿಲೀನಗೊಳಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಇನ್ನು, ಪಾಕಿಸ್ತಾನದ ಬಳಿ ಅಣುಬಾಂಬ್‌ ಇದೆ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ. ಇದರ ಬೆನ್ನಲ್ಲೇ, “ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಎಂದಿಗೂ ಭಾರತದ್ದೇ. ಅದನ್ನು ಭಾರತದ ಜತೆ ವಿಲೀನಗೊಳಿಸುವುದು ನಮ್ಮ ಬದ್ಧತೆಯಾಗಿದೆ” ಎಂದು ಅಮಿತ್‌ ಶಾ (Amit Shah) ಪುನರುಚ್ಚರಿಸಿದ್ದಾರೆ.

ಎಎನ್‌ಐಗೆ ಅಮಿತ್‌ ಶಾ ಅವರು ಸಂದರ್ಶನ ನೀಡಿದ್ದು, ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಪಿಒಕೆ ಕುರಿತ ಪ್ರಶ್ನೆಗೆ ಅವರು, “ಪಾಕ್‌ ಆಕ್ರಮಿತ ಕಾಶ್ಮೀರವು ಭಾರತದ ಜತೆ ವಿಲೀನವಾಗಬೇಕು ಎಂಬುದು ಬಿಜೆಪಿ ಮಾತ್ರವಲ್ಲ, ಅದು ದೇಶದ, ಸಂವಿಧಾನದ ಬದ್ಧತೆಯಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ಹಕ್ಕಿದೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅದನ್ನು ಹೇಗೆ ಭಾರತದ ಜತೆ ವಿಲೀನಗೊಳಿಸಬೇಕು ಎಂಬುದೇ ನಮ್ಮ ಮುಂದಿರುವ ಪ್ರಶ್ನೆಯಾಗಿದೆ” ಎಂದು ತಿಳಿಸಿದರು.

ಫಾರೂಕ್‌ ಅಬ್ದುಲ್ಲಾಗೆ ಚಾಟಿ

ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಹೇಳಿದ ಫಾರೂಕ್‌ ಅಬ್ದುಲ್ಲಾ ಅವರಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನ ಅಣುಬಾಂಬ್‌ ಹೊಂದಿದೆ. ಅದಕ್ಕೆ ಭಾರತ ಗೌರವ ನೀಡಬೇಕು ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಹಾಗೂ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಅದರೆ, ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ, 130 ಕೋಟಿ ಜನಸಂಖ್ಯೆಯ ಭಾರತವು ತನ್ನ ಹಕ್ಕನ್ನು ಪ್ರತಿಪಾದಿಸಲು ಪಾಕಿಸ್ತಾನಕ್ಕೆ ಹೆದರಬೇಕೇ? ರಾಹುಲ್‌ ಗಾಂಧಿ ಅವರು ಇದಕ್ಕೆ ಉತ್ತರ ನೀಡಬೇಕು. ಪಾಕಿಸ್ತಾನವನ್ನು ಗೌರವಿಸಬೇಕಾ? ಪಾಕ್‌ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡಬೇಕಾ ಎಂಬುದರ ಕುರಿತು ರಾಹುಲ್‌ ಗಾಂಧಿ ಉತ್ತರಿಸಲಿ” ಎಂದರು.

ಮೋದಿಯೇ ಪ್ರಧಾನಿ

ನರೇಂದ್ರ ಮೋದಿ ಅವರು 75 ವರ್ಷ ದಾಟಿದ ಬಳಿಕ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಲ್ಲ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೀಡಿದ ಹೇಳಿಕೆಗೆ ಅಮಿತ್‌ ಶಾ ಪ್ರತಿಕ್ರಿಯಿಸಿದರು. “ಆಮ್‌ ಆದ್ಮಿ ಪಕ್ಷವು ದೇಶಾದ್ಯಂತ ಕೇವಲ 22 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗಾಗಿ, ಅರವಿಂದ್‌ ಕೇಜ್ರಿವಾಲ್‌ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ನರೇಂದ್ರ ಮೋದಿ ಅವರು 2029ರವರೆಗೂ ಪ್ರಧಾನಿಯಾಗಿ ಇರುತ್ತಾರೆ. ಅದರ ನಂತರವೂ ಅವರು ನಮ್ಮನ್ನು ಮುನ್ನಡೆಸಲಿದ್ದಾರೆ” ಎಂದು ಹೇಳಿದರು.

“ಕಳೆದ 10 ವರ್ಷಗಳಲ್ಲಿ ಮೋದಿ ಅವರು ದೇಶವನ್ನು ಏಳಿಗೆಯತ್ತ ಕೊಂಡೊಯ್ದಿದ್ದಾರೆ. ಇದೇ ಕಾರಣಕ್ಕಾಗಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿಯೇ 24-30 ಕ್ಷೇತ್ರಗಳಲ್ಲಿ ಜಯ ನಮ್ಮದಾಗಲಿದೆ” ಎಂದರು. ಮೀಸಲಾತಿ ರದ್ದತಿ ಬಗ್ಗೆ ಮಾತನಾಡಿದ ಅವರು, “ಕಳೆದ 10 ವರ್ಷಗಳಿಂದ ನಮ್ಮ ಬಹುಮತದ ಸರ್ಕಾರ ಇದೆ. ಆದರೆ, ನಾವು ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Narendra Modi: 75 ವರ್ಷ ದಾಟಿದರೂ ಮೋದಿ ಪ್ರಧಾನಿ ಸ್ಥಾನದಲ್ಲಿರುತ್ತಾರಾ? ಅಮಿತ್‌ ಶಾ ಹೇಳಿದ್ದಿಷ್ಟು

Exit mobile version