Site icon Vistara News

ಚಾಳಿ ಬಿಡದ ಪಾಕಿಸ್ತಾನ; ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ

Pakistan violates ceasefire

ನವ ದೆಹಲಿ: ಪಾಕಿಸ್ತಾನದ ಸೈನಿಕರು ಇಂದು ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದಾರೆ. ಭಾರತದ ಗಡಿ ಭದ್ರತಾ ಪಡೆ ಸಿಬ್ಬಂದಿ (BSF) ಮೇಲೆ ಅಪ್ರೋಚದಿತ ಗುಂಡಿನ ದಾಳಿ ನಡೆಸಿದ್ದಾರೆ. ಗಡಿ ಭಾಗದಲ್ಲಿ ಒಂದೋ ಉಗ್ರರ ಕಾಟ ಇಲ್ಲವೇ, ಪಾಕಿಸ್ತಾನ ಸೈನಿಕರ ಪುಂಡಾಟ ಇದ್ದೇ ಇರುತ್ತದೆ. ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದ ನಂತರ ಸ್ವಲ್ಪ ದಿನಗಳವರೆಗೆ ಪಾಕ್​ನಿಂದ ಒಂದೇ ಸಮನೆ ಕದನ ವಿರಾಮ ಉಲ್ಲಂಘನೆಯಾಗುತ್ತಿತ್ತು. 2021ರ ಫೆಬ್ರವರಿಯಿಂದ ಈಚೆಗೆ ಪಾಕಿಸ್ತಾನಿ ಸೈನಿಕರು ಯುದ್ಧ ವಿರಾಮ ಉಲ್ಲಂಘಿಸುವ ವರ್ತನೆ ತೋರಿಸಿರಲಿಲ್ಲ. ಆದರೆ ಈಗ ಮತ್ತೆ ಪಾಕ್​ ತನ್ನ ಚಾಳಿ ಮುಂದುವರಿಸಿದೆ.

ಬಿಎಸ್​​ಎಫ್​​ನ ಸಾರ್ವಜನಿಕ ಸಂಪರ್ಕಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿ, ‘ಇಂದು ಬೆಳಗ್ಗೆ ಪಾಕಿಸ್ತಾನದ ಸೈನಿಕರು ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದಾರೆ. ಅಲ್ಲಿ ಬೆಳಗ್ಗೆ ಗಸ್ತಿನಲ್ಲಿದ್ದ ಬಿಎಸ್​ಎಫ್​ ಸಿಬ್ಬಂದಿ ಪ್ರತ್ಯುತ್ತರ ಕೊಟ್ಟಿದ್ದಾರೆ. ಭಾರತದ ಯಾವುದೇ ಯೋಧರಿಗೂ ಗಾಯವಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ-ಪಾಕ್​ ನಡುವೆ 2003ರಲ್ಲಿ ಕದನ ವಿರಾಮಕ್ಕೆ ಸಂಬಂಧಪಟ್ಟಂತೆ ಒಪ್ಪಂದವಾಗಿದೆ. ಹಾಗಿದ್ದಾಗ್ಯೂ ಪಾಕಿಸ್ತಾನ ಆಗಾಗ ತನ್ನ ಬುದ್ಧಿ ತೋರಿಸುತ್ತಲೇ ಇತ್ತು. ಅದರಲ್ಲೂ 2019ರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಆಗಾಗ ಪಾಕ್​ ಕಡೆಯಿಂದ ಭಾರತದ ಕಡೆಗೆ ಗುಂಡು ಬರುತ್ತಿತ್ತು. ಅದನ್ನು ನಿಯಂತ್ರಿಸಲು 2021ರ ಫೆಬ್ರವರಿಯಲ್ಲಿ ಈ ಒಪ್ಪಂದವನ್ನು ಮತ್ತೆ ನವೀಕರಿಸಲಾಗಿದೆ. ಆಗಿನಿಂದಲೂ ಒಂದು ಬಾರಿಯೂ ಪಾಕ್ ಕದನ ವಿರಾಮ ಉಲ್ಲಂಘ ಮಾಡಿರಲಿಲ್ಲ. ಇದರಿಂದಾಗಿ ಅಂತಾರಾಷ್ಟ್ರೀಯ ಗಡಿ ಭಾಗದ ನಿವಾಸಿಗಳು, ಕೃಷಿಕರಿಗೆ ದೊಡ್ಡ ಮಟ್ಟದ ಸಮಾಧಾನ ಉಂಟಾಗಿತ್ತು.

ಇದನ್ನೂ ಓದಿ: Viral Video | ಪಾಕಿಸ್ತಾನದ ಉಗ್ರರು ಗಡಿಯಲ್ಲಿ ಹೇಗೆ ನುಸುಳುತ್ತಾರೆ? ಇಲ್ಲಿದೆ ವಿಡಿಯೊ!

Exit mobile version