Site icon Vistara News

ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಪಾಕಿಸ್ತಾನದ ಮೂವರು ಉಗ್ರರ ಹತ್ಯೆ

Pakistani Terrorists Killed

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಪಾಕಿಸ್ತಾನ ಮೂಲದ ಮೂವರು ಉಗ್ರರು ಹತ್ಯೆ (Pakistani terrorists killed)ಗೀಡಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಈ ಬಗ್ಗೆ ಕಾಶ್ಮೀರ ಐಜಿಪಿ ಟ್ವೀಟ್‌ ಮಾಡಿ ತಿಳಿಸಿದ್ದು, ಮುಂಜಾನೆಯಿಂದಲೇ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿತ್ತು. ಅಂತಿಮವಾಗಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತರ ಬಳಿಯಿದ್ದ ಶಸ್ತ್ರಾಸ್ತ್ರಗಳು, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹಾಗೇ, ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದಾಗಿಯೂ ಮಾಹಿತಿ ನೀಡಿದ್ದಾರೆ.

ಬಾರಾಮುಲ್ಲಾದ ಕ್ರೀರಿ ಏರಿಯಾದ ನಾಜಿಬಾತ್‌ ಎಂಬಲ್ಲಿ ಭಯೋತ್ಪಾದಕರು ಅವಿತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿವಿಧ ಭದ್ರತಾ ಪಡೆಗಳು ಜಂಟಿಯಾಗಿ ಆ ಸ್ಥಳವನ್ನು ಸುತ್ತುವರಿದಿದ್ದವು. ರಕ್ಷಣಾ ಸಿಬ್ಬಂದಿ ಕೈಯಲ್ಲಿ ತಾವು ಸಿಕ್ಕಿಬೀಳುವುದು ಖಚಿತವಾಗುತ್ತಿದ್ದಂತೆ ಅಡಗಿದ್ದ ಉಗ್ರರು ಒಮ್ಮೆಲೇ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿಯೂ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರ ಗುಂಡಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದರೆ, ಭದ್ರತಾ ಪಡೆಯ ಗುಂಡಿನ ದಾಳಿಗೆ ಮೂವರು ಉಗ್ರರು ಬಲಿಯಾಗಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಪೊಲೀಸ್‌ ಅಧಿಕಾರಿ ಸಾವು, ಪುತ್ರಿಗೆ ಗಾಯ

ಮೇ 24ರಂದು ಶ್ರೀನಗರದ ಸೌರಾ ಎಂಬಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಇದರಲ್ಲಿ ಜಮ್ಮು -ಕಾಶ್ಮೀರದ ಪೊಲೀಸ್‌ ಅಧಿಕಾರಿ ಸೈಫುಲ್ಲಾ ಖಾದ್ರಿ ಎಂಬುವರು ಮೃತಪಟ್ಟಿದ್ದರೆ, ಅವರ 7ವರ್ಷದ ಮಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆಕೆಗೆ ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಗ್ರರು ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಸೈಫುಲ್ಲಾ ಖಾದ್ರಿ ಮಗಳು ಹೆದರಿ ತನ್ನ ಅಪ್ಪನನ್ನು ತಬ್ಬಿಕೊಂಡಳು. ಇದೇ ವೇಳೆ ಉಗ್ರನೊಬ್ಬ ಹಾರಿಸಿದ ಗುಂಡು ಆಕೆಯ ತೋಳಿಗೆ ತಗುಲಿತ್ತು. ಆಕೆಯ ಜೀವಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ₹20,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಪ್ರಧಾನಿ ಮೋದಿ ಚಾಲನೆ

Exit mobile version