Site icon Vistara News

Seema Haider: ತಿರಂಗಾ ಹಾರಿಸಿ ಭಾರತ್‌ ಮಾತಾ ಕಿ ಜೈ ಎಂದ ಪಾಕಿಸ್ತಾನದ ಸೀಮಾ ಹೈದರ್! ವಿಡಿಯೊ ವೈರಲ್

Seema Haider Hoists Indian Flag

Pakistan's Seema Haider hoists the Indian flag ahead of Independence Day 2023

ಲಖನೌ: ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾದ ಉತ್ತರ ಪ್ರದೇಶದ ಸಚಿನ್‌ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ (Seema Haider) ಲವ್‌ ಸ್ಟೋರಿಯು ದೇಶಾದ್ಯಂತ ಸುದ್ದಿಯಾಗಿದೆ. ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ (Sachin Meena) ಉತ್ತರ ಪ್ರದೇಶದಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಅವರೀಗ ಭಾರತದ ಹಿಂದು ಆಚರಣೆಗಳನ್ನು ಅನುಸರಿಸುತ್ತಿದ್ದಾರೆ. ಇನ್ನು ಇದರ ಬೆನ್ನಲ್ಲೇ, ಭಾರತದ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ಸೀಮಾ ಹೈದರ್‌ ಅವರು ತ್ರಿವರ್ಣ ಧ್ವಜ (Tiranga) ಹಾರಿಸಿ, ಭಾರತ್‌ ಮಾತಾ ಕಿ ಜೈ (Bharat Mata Ki Jai) ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ (ಆಗಸ್ಟ್‌ 13) ಗ್ರೇಟರ್‌ ನೊಯ್ಡಾದ ಮನೆಯ ಮೇಲೆ ಸೀಮಾ ಹೈದರ್‌, ಅವರ ಪತಿ ಸಚಿನ್‌ ಮೀನಾ ಹಾಗೂ ಸ್ಥಳೀಯರು ಸೇರಿ ತಿರಂಗಾ ಹಾರಿಸಿದ್ದಾರೆ. ತಿರಂಗಾ ಹಾರಿಸಿದ ಬಳಿಕ ಸೀಮಾ ಹೈದರ್‌ ಅವರು ಭಾರತ್‌ ಮಾತಾ ಕಿ ಜೈ, ವಂದೇ ಮಾತರಂ ಸೇರಿ ಹಲವು ಘೋಷಣೆ ಕೂಗಿದ್ದಾರೆ. ಹಾಗೆಯೆ, ಅವರು ಪಾಕಿಸ್ತಾನ್‌ ಮುರ್ದಾಬಾದ್‌ ಎಂದು ಘೋಷಣೆ ಕೂಗಿದ ವಿಡಿಯೊ ಕೂಡ ವೈರಲ್‌ ಅಗಿದೆ.

ಇದನ್ನೂ ಓದಿ: Seema Haider: ಸೀರೆಯಲ್ಲಿ ಮಿಂಚಿದ ಸೀಮಾ, ಸೂಟು-ಬೂಟು ತೊಟ್ಟ ಸಚಿನ್;‌ ಭಲೇ ಜೋಡಿ, ವಿಡಿಯೊ ನೋಡಿ

ನಾನು ಭಾರತೀಯಳು ಎಂದ ಸೀಮಾ

“ನಾನೀಗ ಭಾರತೀಯಳು, ನಾನು ಇಲ್ಲಿಯೇ ಇರುತ್ತೇನೆ. ಹಿಂದುತ್ವವನ್ನು ನಾನು ಅಳವಡಿಸಿಕೊಂಡಿದ್ದೇನೆ. ನಾನು ಹಿಂದು ಧರ್ಮದ ಮೌಲ್ಯಗಳನ್ನು ಸ್ವೀಕರಿಸುತ್ತೇನೆ. ನಾನೀಗ ಮಾಂಸಾಹಾರ ಸೇವನೆಯನ್ನು ನಿಲ್ಲಿಸಿದ್ದೇನೆ” ಎಂದು ಸೀಮಾ ಹೈದರ್‌ ಈಗಾಗಲೇ ಹೇಳಿದ್ದಾರೆ. ಹಾಗೆಯೇ, ನಮ್ಮ ಮದುವೆಯನ್ನು ಸರ್ಕಾರ ಮಾನ್ಯ ಮಾಡಿ, ನನಗೆ ಪೌರತ್ವ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ, ಸೀಮಾ ಹೈದರ್‌ ಅವರು ಸಚಿನ್‌ ಸಿಂಗ್‌ ಮನೆಯಲ್ಲಿಯೇ ವಾಸವಿದ್ದಾರೆ.

ಪಾಕಿಸ್ತಾನದ ವಿರುದ್ಧ ಘೋಷಣೆ

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್‌ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್‌, ಆಕೆಯ ನಾಲ್ಕು ಮಕ್ಕಳು, ಸಚಿನ್‌ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್‌ ವಿಚಾರಣೆ ಕೂಡ ನಡೆಸಿದೆ.

Exit mobile version