ನವದೆಹಲಿ: ವಿಮಾನಗಳಲ್ಲಿ ಪ್ರಯಾಣಿಕರ ಅತಿರೇಕದ ವರ್ತನೆಗಳು ಇತ್ತೀಚೆಗೆ ಮಿತಿಮೀರುತ್ತಿವೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವುದು, ಕುಡಿತದ ಮತ್ತಿನಲ್ಲಿ ವಿಮಾನದ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುವುದು (IndiGo Passenger), ಸಿಗರೇಟ್ ಸೇದಲು ಯತ್ನಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸೇರಿ ಹಲವು ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗುತ್ತಿವೆ. ಇದರ ಬೆನ್ನಲ್ಲೇ, ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ತುರ್ತು ನಿರ್ಗಮನ ದ್ವಾರದ (Emergency Exit Door) ಕವರ್ ತೆಗೆದಿದ್ದು, ಕೆಲ ಕ್ಷಣಗಳವರೆಗೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಆತಂಕ ಎದುರಾಗಿತ್ತು ಎಂದು ತಿಳಿದುಬಂದಿದೆ.
ಹೈದರಾಬಾದ್‌ನಿಂದ ದೆಹಲಿಗೆ ಹೊರಟ್ಟಿದ್ದ ವಿಮಾನದಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಏಕಾಏಕಿ ಎಮರ್ಜನ್ಸಿ ಎಕ್ಸಿಟ್ ಡೋರ್‌ನ ಕವರ್ ತೆಗೆದಿದ್ದಾರೆ. ಜುಲೈ 8ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಸುದ್ದಿಯಾಗಿದೆ. ವಿಮಾನದ 18 A ಸೀಟ್‌ನಲ್ಲಿ ಕುಳಿತಿದ್ದ ಅವರು ಎಮರ್ಜನ್ಸಿ ಎಕ್ಸಿಟ್ ಡೋರ್ ಸಮೀಪವೇ ಇದ್ದರು. ಆಗ ಇಂತಹ ವರ್ತನೆ ತೋರಿದ ಕಾರಣ ಕೆಲ ಕಾಲ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ವಿಮಾನದ ಸಿಬ್ಬಂದಿಯು ವ್ಯಕ್ತಿಯನ್ನು ಬೇರೊಂದು ಸೀಟಿನಲ್ಲಿ ಕೂರಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ನೀಡಲಾಗಿದೆ. ಆತನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.
ವಿಮಾನದ ತುರ್ತು ನಿರ್ಗಮನ ದ್ವಾರದ ಕವರ್ ತೆಗೆಯುವುದು ಅಪಾಯಕಾರಿಯಾಗಿದೆ. ಕವರ್ ತೆಗೆಯುವುದರಿಂದ ವಿಮಾನ ಲ್ಯಾಂಡ್ ಆಗುವಾಗ ಯಾವುದೇ ಕ್ಷಣದಲ್ಲಿ ಬೇಕಾದರೂ ಎಮರ್ಜನ್ಸಿ ಎಕ್ಸಿಟ್ ಡೋರ್ ತೆರೆಯುತ್ತದೆ. ಇದರಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸಬಹುದು ಎಂದು ವೈಮಾನಿಕ ತಜ್ಞರು ಮಾಹಿತಿ ನೀಡಿದ್ದಾರೆ. ಹಾಗಾಗಿಯೇ, ವ್ಯಕ್ತಿಯು ಕವರ್ ತೆಗೆದಾಗ ವಿಮಾನದ ಸಿಬ್ಬಂದಿ ಕೂಡ ಒಂದು ಕ್ಷಣ ಗಲಿಬಿಲಿಯಾದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Air India: ವಿಮಾನದಲ್ಲಿ ಸಿಬ್ಬಂದಿಗೆ ಬೈದು ಟಾಯ್ಲೆಟ್ ಬಾಗಿಲು ಮುರಿದ ವ್ಯಕ್ತಿ; ಸಿಗರೇಟ್ ಚಟಕ್ಕಾಗಿ ಅವಾಂತರ
ಕೆಲ ತಿಂಗಳ ಹಿಂದಷ್ಟೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರತೀಕ್ ಎಂಬ ವ್ಯಕ್ತಿಯು ಕುಡಿದ ಮತ್ತಿನಲ್ಲಿ ವಿಮಾನದ ತುರ್ತು ನಿರ್ಗಮನ ದ್ವಾರದ ಫ್ಲ್ಯಾಪ್ ತೆರೆಯಲು ಯತ್ನಿಸಿದ್ದ. ವಿಮಾನದ ಸಿಬ್ಬಂದಿಯು ಎಷ್ಟು ಹೇಳಿದರೂ ಕೇಳದೆ, ವಿಮಾನ ಹಾರುತ್ತಿರುವಾಗಲೇ ಮೂರು ಬಾರಿ ಎಮರ್ಜನ್ಸಿ ಡೋರ್‌ನ ಫ್ಲ್ಯಾಪ್ ತೆಗೆಯಲು ಯತ್ನಿಸಿದ್ದ. ಇದಾದ ಬಳಿಕ ಬೆಂಗಳೂರಿನಲ್ಲಿ ಆತನನ್ನು ಬಂಧಿಸಲಾಗಿತ್ತು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧವೂ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದ ಆರೋಪ ಕೇಳಿಬಂದಿತ್ತು.