ಚೆನ್ನೈ: ತಮಿಳುನಾಡು ಎಐಎಡಿಎಂಕೆ ಪಕ್ಷದ ಉಭಯ ನಾಯಕತ್ವ ಅಧಿಕೃತವಾಗಿ ರದ್ದುಗೊಂಡಿದೆ. ಇಂದು ಪಕ್ಷದ ಸಾಮಾನ್ಯ ಸಭೆ ನಡೆದಿತ್ತು. ಅದರಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇತ್ತ ಒ.ಪನ್ನೀರಸೆಲ್ವಂಗೆ ತೀವ್ರ ಹಿನ್ನಡೆಯಾಗಿದ್ದಷ್ಟೇ ಅಲ್ಲ, ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಡಿ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೇ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಪನ್ನೀರಸೆಲ್ವಂ ಅವರು ಎಐಎಡಿಎಂಕೆಯ ಸಹ ಸಂಯೋಜಕರಾಗಿದ್ದರು, ಅಲ್ಲದೆ ಖಜಾಂಚಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ವಜಾಗೊಳಿಸಲಾಗಿದೆ. ಹಾಗೇ, ಪನ್ನೀರಸೆಲ್ವಂ ಬೆಂಬಲಿಗರಾದ ಆರ್.ವೈಥಿಲಿಂಗಮ್, ಜೆಸಿಡಿ ಪ್ರಭಾಕರ್ ಮತ್ತು ಮನೋಜನ್ ಪಾಂಡಿಯನ್ ಅವರನ್ನೂ ಉಚ್ಚಾಟನೆ ಮಾಡಲಾಗಿದೆ.
ಜಯಲಲಿತಾ ಮೃತಪಟ್ಟ ಬಳಿಕ ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಇಬ್ಬರೂ ಎಐಎಡಿಎಂಕೆಯ ನೇತೃತ್ವ ವಹಿಸಿಕೊಂಡಿದ್ದರು. ಆದರೆ ಈ ದ್ವಿನಾಯಕತ್ವ ತೆಗೆದು ಹಾಕಿ, ಪಕ್ಷಕ್ಕೆ ಏಕನಾಯಕ ಬೇಕು ಎಂಬ ಬೇಡಿಕೆಯನ್ನು ಪಳನಿಸ್ವಾಮಿ ಮತ್ತು ಅವರ ಬೆಂಬಲಿಗರು ಪಕ್ಷದೊಳಗೆ ಹಿರಿಯ ನಾಯಕರ ಎದುರು ಇಟ್ಟಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ, ಅಲ್ಲೂ ಕೂಡ ಪಳನಿಸ್ವಾಮಿ ಬಣಕ್ಕೆ ಜಯಸಿಕ್ಕಿತ್ತು. ಅದರ ಬೆನ್ನಲ್ಲೇ ಪನ್ನೀರಸೆಲ್ವಂ ಬೆಂಬಲಿಗರು ಗಲಾಟೆ ಕೂಡ ಸೃಷ್ಟಿಸಿದ್ದರು.
ಇನ್ನು ಪಳನಿಸ್ವಾಮಿ ಸದ್ಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಈ ಸ್ಥಾನಕ್ಕಾಗಿ ಚುನಾವಣೆ ನಡೆಸಬೇಕು ಎಂಬ ನಿರ್ಣಯವನ್ನೂ ಇಂದಿನ ಸಾಮಾನ್ಯ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಯಿತು. ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಎಐಎಡಿಎಂಕೆಯ ಎಲ್ಲ ಪ್ರಾಥಮಿಕ ಸದಸ್ಯರೂ ಮತ ಚಲಾಯಿಸಲಿದ್ದಾರೆ. ಹಾಗೇ, ಹಿರಿಯ ಕಾರ್ಯಕಾರಿಗಳಾದ ನಾಥಮ್ ಆರ್ ವಿಶ್ವನಾಥನ್ ಮತ್ತು ಪೊಲ್ಲಾಚಿ ವಿ. ಜಯರಾಮನ್ ಅವರು ಎಲೆಕ್ಷನ್ ಕಮಿಷನರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ:AIADMK Tussle: ತಮಿಳುನಾಡು ವಿಪಕ್ಷ ಗೊಂದಲ; ಎಐಎಡಿಎಂಕೆಯಿಂದ ಪನ್ನೀರಸೆಲ್ವಂ ಉಚ್ಚಾಟನೆ