ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಆವರಣದಲ್ಲಿ ಮಂಗಳವಾರ ತಡರಾತ್ರಿ ದುರ್ಘಟನೆ ನಡೆದಿದೆ. ರಾಮಮಂದಿರ ಆವರಣದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ (UPSSF) (ಅರೆ ಮಿಲಿಟರಿ ಪಡೆ) ಯೋಧರೊಬ್ಬರಿಗೆ ಗುಂಡು ತಗಲು ಅವರು ಮೃತಪಟ್ಟಿದ್ದಾರೆ. ಯೋಧನ ಬಂದೂಕಿನಿಂದಲೇ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾದ ಶತ್ರುಘ್ನ ವಿಶ್ವಕರ್ಮ (25) ಎಂಬ ಯೋಧ ಮೃತಪಟ್ಟಿದ್ದಾರೆ. ಇವರು ಯುಪಿಎಸ್‌ಎಸ್‌ಎಫ್‌ನ ಪೇದೆಯಾಗಿದ್ದರು. ತಡರಾತ್ರಿ ಇವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದ. ಆದಾಗ್ಯೂ, ಆಕಸ್ಮಿಕವಾಗಿ ಗುಂಡು ಹಾರಿದೆಯೋ ಅಥವಾ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫೈಜಾಬಾದ್ ವಲಯದ ಐಜಿಪಿ ಪ್ರವೀಣ್ ಕುಮಾರ್ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. “ಆಕಸ್ಮಿಕವಾಗಿ ಯೋಧನ ಬಂದೂಕಿನಿಂದ ಗುಂಡು ಹಾರಿ, ಅದು ಅವರಿಗೇ ತಗುಲಿರುವ ಸಾಧ್ಯತೆ ಇದೆ. ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆದಾಗ್ಯೂ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂಬುದಾಗಿ ಅವರು ತಿಳಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಆ ವರದಿಯೂ ಬರಬೇಕಿದೆ ಎನ್ನಲಾಗಿದೆ.
ರಾಮಮಂದಿರ ಆವರಣದ, ಮಂದಿರದಿಂದ 150 ಮೀಟರ್ ದೂರವಿರುವ ಕೋಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್ ನಿರ್ಮಿಸಲಾಗುತ್ತಿದೆ. ಅಲ್ಲಿ ಶತ್ರುಘ್ನ ವಿಶ್ವಕರ್ಮ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹಲವು ಭದ್ರತಾ ಸಿಬ್ಬಂದಿ ಕೂಡ ರಾತ್ರಿ ಇದ್ದರು. ಇದೇ ವೇಳೆ ಗುಂಡು ಹಾರಿದೆ ಎಂದು ತಿಳಿದುಬಂದಿದೆ. ಅಂಬೇಡ್ಕರ್ ನಗರದ ಕೈಜ್‌ಪುರ ಗ್ರಾಮದವರಾದ ಶತ್ರುಘ್ನ ವಿಶ್ವಕರ್ಮ ಅವರು 2019ರಲ್ಲಿ ಯುಪಿಎಸ್‌ಎಸ್‌ಎಫ್‌ಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ಅವರನ್ನು ರಾಮಮಂದಿರದ ಭದ್ರತೆಗೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: Ram Mandir: ರಾಮಮಂದಿರ ಸ್ಫೋಟಿಸುವ ಉಗ್ರರ ಬೆದರಿಕೆ ಆಡಿಯೊ ವೈರಲ್; ಅಯೋಧ್ಯೆಯಲ್ಲಿ ಹೈ ಅಲರ್ಟ್