ಕೋಟಾ: ರಾಜಸ್ಥಾನದ ಕೋಟಾದಲ್ಲಿ ಬ್ರಾಹ್ಮಣ ಸಮುದಾಯ (Brahmin Community) ದ ಪಾಲಕರು, ಅಲ್ಲಿನ ಒಂದು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಯ ಪುಸ್ತಕದಲ್ಲಿರುವ ಕೆಲವು ಪಾಠಗಳು, ಕತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾವೆಲ್ಲ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರು. ನಮ್ಮ ಮಕ್ಕಳು ನಮ್ಮ ಸಂಸ್ಕಾರ ಕಲಿಯಬೇಕು. ಆದರೆ ಎರಡನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ಮನೆಗೆ ಬಂದು ಬಿರ್ಯಾನಿ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದಾನೆ. ಏಳು ವರ್ಷದ ಅವನಿಗೆ ಬಿರ್ಯಾನಿ ಎಂಬ ಆಹಾರ ಇದೆ ಎಂದು ಗೊತ್ತಾಗಿದ್ದೇ ಅವನ ಶಾಲೆಯಲ್ಲಿ ಕಲಿಸಿದ ಪಾಠದಿಂದ’ ಎಂದು ಪಾಲಕರೊಬ್ಬರು ಆರೋಪಿಸಿದ್ದಾರೆ.
ಈ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ಮುಸ್ಲಿಮೇತರರೇ ಇದ್ದಾರೆ. ಆದರೆ ಮುಸ್ಲಿಂ ಸಮುದಾಯದಲ್ಲಿ ಇರುವ ಶಬ್ದಗಳನ್ನೊಳಗೊಂಡ ಪಾಠಗಳು ಇವೆ. ಅಂದರೆ, ಪುಸ್ತಕಗಳ ಕತೆಯಲ್ಲಿ ಶಾನು, ಸಾನಿಯಾ, ಅಮೀರ್..ಇತ್ಯಾದಿ ಹೆಸರುಗಳಿದ್ದರೆ..ಅಪ್ಪ-ಅಮ್ಮ ಬದಲಾಗಿ ಅಮ್ಮಿ- ಅಬ್ಬು ( ಮುಸ್ಲಿಂ ಸಮುದಾಯದವರು ತಮ್ಮ ತಾಯಿ-ತಂದೆಯನ್ನು ಹೀಗೆ ಕರೆಯುತ್ತಾರೆ.) ಎಂದು ಬರೆಯಲಾಗಿದೆ. ಪಾಠದಲ್ಲಿ ಇರುವ ಈ ಶಬ್ದಗಳೀಗ ನಮ್ಮ ಮನೆಯ ಮಕ್ಕಳ ಬಾಯಲ್ಲಿ ಬರುತ್ತಿವೆ. ಮನೆಗೆ ಬಂದು ನಮ್ಮನ್ನು ಅಮ್ಮಿ- ಅಬ್ಬು ಎನ್ನುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಲಕರು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಸ್ಥಳೀಯ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ನಾಯಕರಿಗೆ ದೂರನ್ನೂ ನೀಡಿದ್ದಾರೆ.
ಯಾವುದು ಈ ಪುಸ್ತಕ?
ಹೀಗೆ ವಿವಾದಕ್ಕೆ ಕಾರಣವಾದ ಪುಸ್ತಕದ ಹೆಸರು ‘ಗುಲ್ ಮೊಹರ್’. 113 ಪುಟಗಳನ್ನು ಹೊಂದಿದ್ದು, ಇದರ ಬೆಲೆ 352 ರೂಪಾಯಿ. ಹೈದರಾಬಾದ್ ಮೂಲದ ಪ್ರಕಾಶಕರೊಬ್ಬರು ಪ್ರಕಟಿಸಿರುವ ಈ ಪುಸ್ತಕವನ್ನು ಸಿಬಿಎಸ್ಇ ಮಂಡಳಿ, ಎರಡನೇ ತರಗತಿಯ ಪಠ್ಯದಲ್ಲಿ ಸೇರಿಸಿದೆ. ಆದರೆ ಇದರಲ್ಲಿ ಎಲ್ಲವೂ ಮುಸ್ಲಿಂ ಹೆಸರುಗಳು, ಪದಗಳೇ ಇವೆ. ಈ ಮೂಲಕ ಶಿಕ್ಷಣವನ್ನು ಇಸ್ಲಾಮೀಕರಣ ಮಾಡಲಾಗುತ್ತಿದೆ ಮತ್ತು ಈ ಮೂಲಕ ಹಿಂದು ಮಕ್ಕಳನ್ನು ಅವರ ಧರ್ಮದಿಂದಲೇ ದೂರ ಮಾಡುವ ಯತ್ನ ನಡೆಯುತ್ತಿದೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಹಾಗೇ, ವಿಎಚ್ ಪಿ ಮತ್ತು ಬಜರಂಗದಳದ ಮುಖಂಡರು ಈ ಬಗ್ಗೆ ರಾಜ್ಯದ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಪ್ರವಾದಿ ಅವಹೇಳನ| ಹಳೆ ಟ್ವೀಟ್ ವೈರಲ್ ಆದ ಬೆನ್ನಿಗೇ ಹರಿಯಾಣದ ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಾನತು