Site icon Vistara News

Parliament budget session: ಲಂಡನ್‌ ಹೇಳಿಕೆಗಾಗಿ ರಾಹುಲ್‌ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ; ಸಂಸತ್ತಿನಲ್ಲಿ ಕೋಲಾಹಲ

Rahul Rajanath

#image_title

ನವ ದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲಂಡನ್‌ ಭಾಷಣ ಸೋಮವಾರ ಮರು ಆರಂಭಗೊಂಡ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ (Parliament budget session) ಭಾರಿ ಕೋಲಾಹಲವನ್ನು ಸೃಷ್ಟಿಸಿದೆ. ರಾಹುಲ್‌ ಅವರು ಸದನದ ಕ್ಷಮೆ ಯಾಚಿಸಬೇಕು ಎಂದು ಉಭಯ ಸದನಗಳಲ್ಲೂ ಬಿಜೆಪಿ ನಾಯಕರು ಪಟ್ಟುಹಿಡಿದರು. ಇದನ್ನು ಪ್ರತಿಭಟಿಸಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗೆ ಇಳಿದಾಗ ಕೋಲಾಹಲ ಸೃಷ್ಟಿಯಾಯಿತು. ಎರಡೂ ಸದನಗಳನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದಕ್ಕೆ ಹಾಕಲಾಯಿತು.

ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಬ್ರಿಟಿಷ್‌ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಾಯಕ ಧ್ವನಿಯನ್ನು ಉಡುಗಿಸಲಾಗುತ್ತಿದೆ ಎಂದು ಹೇಳಿದ್ದರು. ಭಾರತದ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಾಯಕ ಮೈಕ್‌ಗಳನ್ನು ಆಗಾಗ ಬಂದ್‌ ಮಾಡಲಾಗುತ್ತಿದೆ ಎಂದು ನೇರ ಆರೋಪ ಮಾಡಿದ್ದರು. ಇದೇ ಮಾತನ್ನು ಕೇಂಬ್ರಿಜ್‌ ವಿವಿಯಲ್ಲೂ ಪುನರುಚ್ಚರಿಸಿದ್ದರು. ಜತೆಗೆ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು.

ರಾಹುಲ್‌ ಗಾಂಧಿ ಅವರ ಈ ಮಾತುಗಳ ಬಗ್ಗೆ ಬಿಜೆಪಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಇದರ ಸಂಸತ್ತಿನ ನಡಾವಳಿಯನ್ನು ಪ್ರಶ್ನೆ ಮಾಡಿದ್ದರಿಂದ ಸಂಸತ್‌ ಅಧಿವೇಶನದಲ್ಲೂ ಅದರ ಪ್ರಸ್ತಾಪ ಮಾಡಲಾಯಿತು.

ಸೋಮವಾರ ಬಜೆಟ್‌ ಅಧಿವೇಶನದ ಎರಡನೇ ಹಂತ ಆರಂಭವಾಗುತ್ತಿದ್ದಂತೆಯೇ ರಕ್ಷಣಾ ಸಚಿವ ರಾಜನಾಥ್‌ ಸಿಂ ಅವರು ವಿಷಯ ಪ್ರಸ್ತಾಪ ಮಾಡಿ ರಾಹುಲ್‌ ಗಾಂಧಿ ಕ್ಷಮೆ ಯಾಚನೆಗೆ ಒತ್ತಾಯಿಸಿದರು. ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಪ್ರಲ್ಹಾದ್‌ ಜೋಶಿ ಅವರು ಕೂಡಾ ಧ್ವನಿ ಎತ್ತಿದರು. ಆಗ ಪ್ರತಿಪಕ್ಷಗಳ ನಾಯಕರು ಸದನದ ಬಾವಿಗೆ ಧಾವಿಸಿ ಪ್ರತಿಭಟಿಸಿದರು.

ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಪಿಯುಷ್‌ ಗೋಯೆಲ್‌ ಅವರು ರಾಹುಲ್‌ ಕ್ಷಮೆ ಯಾಚನೆಗೆ ಒತ್ತಾಯಿಸಿದಾಗ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಲಾಯಿತು.

ʻʻಪ್ರತಿಪಕ್ಷದ ಪ್ರಮುಖ ನಾಯಕರೊಬ್ಬರು ವಿದೇಶಿ ನೆಲದಲ್ಲಿ ನಿಂತು ಭಾರತದ ಪ್ರಜಾಸತ್ತೆಯ ಮೇಲೆ ದಾಳಿ ಮಾಡಿದ್ದಾರೆ. ಅವರು ಭಾರತ ದೇಶದ ನಾಗರಿಕರು ಮತ್ತು ಸಂಸತ್ತನ್ನು ಅಪಮಾನಿಸಿದ್ದಾರೆ. ಭಾರತದಲ್ಲಿ ವಾಕ್‌ ಸ್ವಾತಂತ್ರ್ಯ ಇದ್ದೇ ಇದೆ. ಸಂಸದರು ಸಂಸತ್ತಿನಲ್ಲಿ ಮಾತನಾಡಲು ಅವಕಾಶವಿದೆ. ರಾಹುಲ್‌ ಗಾಂಧಿ ಅವರು ಸಂಸತ್ತಿನ ಕ್ಷಮೆ ಯಾಚಿಸಬೇಕುʼʼ ಎಂದು ಗೋಯೆಲ್‌ ಆಗ್ರಹಿಸಿದರು.

ಮುಂದುವರಿದ ಅಧಿವೇಶನದ ಉದ್ದೇಶ

ಈ ಬಾರಿಯ ಬಜೆಟ್‌ ಅಧಿವೇಶನ ಜನವರಿ 31ರಂದು ಆರಂಭವಾಗಿತ್ತು. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ ಮೇಲೆ ಅದರ ಮೇಲೆ ವಿಸ್ತೃತ ಚರ್ಚೆ ನಡೆಸಲಾಗಿತ್ತು. ಫೆಬ್ರವರಿ 13ರವರೆಗೆ ಅಧಿವೇಶನದ ಮೊದಲ ಹಂತ ನಡೆದು ಬಜೆಟ್‌ ಪ್ರಸ್ತಾವನೆಗಳ ಅವಲೋಕನಕ್ಕಾಗಿ ಒಂದು ತಿಂಗಳ ಮಧ್ಯಂತರ ಅವಧಿ ನೀಡಲಾಗಿತ್ತು. ಫೆಬ್ರವರಿ 13ರಂದು ಮುಂದೂಡಲಾದ ಅಧಿವೇಶನ ಮಾರ್ಚ್‌ 13ರಂದು ಮರುಆರಂಭಗೊಂಡಿದೆ. ಇದು ಏಪ್ರಿಲ್‌ 6ರವರೆಗೆ ಮುಂದುವರಿಯಲಿದೆ.

ಈ ಮುಂದುವರಿದ ಅಧಿವೇಶನದಲ್ಲಿ ಬಹುರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2002 ಮತ್ತು ಜನ ವಿಶ್ವಾಸ (ಪ್ರಸ್ತಾವನೆಗಳ ತಿದ್ದುಪಡಿ) ವಿಧೇಯಕ 2022 ಸೇರಿದಂತೆ ಹಲವು ವಿಧೇಯಕಗಳಿಗೆ ಅಂಗೀಕಾರ ನೀಡಬೇಕಾಗಿದೆ. ರಾಜ್ಯಸಭೆಯಲ್ಲಿ 26 ವಿಧೇಯಕಗಳು ಅಂಗೀಕಾರಕ್ಕೆ ಬಾಕಿ ಇದ್ದರೆ, ಲೋಕಸಭೆಯಲ್ಲಿ ಒಂಬತ್ತು ವಿಧೇಯಕಗಳಿವೆ.

ಈ ನಡುವೆ, ಅಧಿವೇಶನವನ್ನು ಸುಗಮವಾಗಿ ನಡೆಸುವ, ವಿಧೇಯಕಗಳಿಗೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಕಾರ್ಯತಂತ್ರ ರೂಪಿಸಿದ್ದರೆ ಒಟ್ಟು 16 ಪ್ರತಿಪಕ್ಷಗಳು ನಾನಾ ವಿಚಾರಗಳಿಗೆ ಸಂಬಂಧಿಸಿ ಸರ್ಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸುವ ತಂತ್ರ ರೂಪಿಸಲು ಸೋಮವಾರ ಬೆಳಗ್ಗೆ ಸಭೆ ನಡೆಸಿದ್ದವು.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತನಿಖಾ ಏಜೆನ್ಸಿಗಳ ದುರುಪಯೋಗ, ಅದಾನಿ ಕಂಪನಿಗಳ ವಿಚಾರವನ್ನೂ ಸೇರಿಸಿ ಸರ್ಕಾರದ ವಿರುದ್ಧ ಎತ್ತಬೇಕಾದ ಪ್ರಮುಖ ಸಂಗತಿಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಕಾಂಗ್ರೆಸ್‌, ಡಿಎಂಕೆ, ಜೆಡಿಯು, ಆಮ್‌ ಆದ್ಮಿ ಪಾರ್ಟಿ, ಸಿಪಿಐ (ಎಂ), ಸಿಪಿಐ, ಕೇರಳ ಕಾಂಗ್ರೆಸ್‌, ಆರ್‌ಎಲ್‌ಡಿ, ಎನ್‌ಸಿಪಿ, ನ್ಯಾಷನಲ್‌ ಕಾನ್ಫರೆನ್ಸ್‌, ಐಯುಎಂಎಲ್‌, ಶಿವಸೇನೆ (ಉದ್ಧವ್‌ ಬಣ), ಎಂಡಿಎಂಕೆ, ಆರ್‌ಎಸ್‌ಪಿ, ಆರ್‌ಜೆಡಿ ಮತ್ತು ಜೆಎಂಎಂ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.

ಇದನ್ನೂ ಓದಿ Modi in Karnataka: ಕಾಂಗ್ರೆಸ್‌ನಿಂದ ಬಸವೇಶ್ವರರಿಗೆ ಅವಮಾನ: ರಾಹುಲ್‌ ಭಾಷಣ ಉಲ್ಲೇಖಿಸಿದ ಮೋದಿ

Exit mobile version