ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು (ಜ.27) ಪರೀಕ್ಷಾ ಪೇ ಚರ್ಚಾ 2023ರ ವಾರ್ಷಿಕ ಕಾರ್ಯಕ್ರಮದಲ್ಲಿ ಬೋರ್ಡ್ ಪರೀಕ್ಷೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ನವ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. PPC 2023 ಸ್ಪರ್ಧೆಯ ವಿಜೇತರು ಅಲ್ಲಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯುತ್ತಾರೆ.
ಈವೆಂಟ್ ಅನ್ನು ಶಿಕ್ಷಣ ಸಚಿವಾಲಯ, ಪ್ರಧಾನ ಮಂತ್ರಿ ಕಚೇರಿ ಇವುಗಳಿಂದ ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಶಿಕ್ಷಣ ಸಚಿವಾಲಯದ ಅಧಿಕೃತ ವೆಬ್‌ಸೈಟ್, education.gov.in ಈ ಎಲ್ಲಾ ನೇರ ಪ್ರಸಾರಗಳಿಗೆ ಲಿಂಕ್‌ಗಳನ್ನು ಹೊಂದಿದೆ.
ಈ ವರ್ಷ, ಸುಮಾರು 38.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಪೆ ಚರ್ಚಾಗೆ ನೋಂದಾಯಿಸಿಕೊಂಡಿದ್ದಾರೆ. ಇದು ಕಳೆದ ವರ್ಷ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ (15.73 ಲಕ್ಷ)ಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇಲ್ಲಿಯವರೆಗೆ ಸುಮಾರು 20 ಲಕ್ಷ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ ಮತ್ತು ಎನ್‌ಸಿಇಆರ್‌ಟಿ, ಕೌಟುಂಬಿಕ ಒತ್ತಡ, ಒತ್ತಡ ನಿರ್ವಹಣೆ, ಅಕ್ರಮ ವಿಧಾನಗಳ ತಡೆಗಟ್ಟುವಿಕೆ, ಆರೋಗ್ಯವಾಗಿ ಮತ್ತು ಸದೃಢವಾಗಿರುವುದು ಹೇಗೆ, ವೃತ್ತಿ ಆಯ್ಕೆ ಮುಂತಾದ ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಸಚಿವರು ತಿಳಿಸಿದರು.